ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಂಕಲ್ಪ ಸಮಾವೇಶ: ಸಿಂಗ್, ರವಿ ಬಿರುಸಿನ ಪ್ರಚಾರ

Last Updated 9 ಏಪ್ರಿಲ್ 2021, 15:17 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಶುಕ್ರವಾರ ವಿವಿಧೆಡೆ ಪ್ರಚಾರ ನಡೆಸಿದರು.

ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರವಿ, ‘ಬಿಜೆಪಿಗೆ ಅಧಿಕಾರ ಹಿಡಿಯುವುದೇ ಗುರಿ ಅಥವಾ ವೃತ್ತಿಯಲ್ಲ. ಭಾರತದ ಶಕ್ತಿಯನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡುವುದೇ ನಮ್ಮ ಗುರಿ’ ಎಂದು ತಿಳಿಸಿದರು.

‘ಪಕ್ಷದ ಸಿದ್ಧಾಂತ ಹಾಗೂ ಗುರಿಗಳನ್ನು ಮನವರಿಕೆ ಮಾಡಿಕೊಟ್ಟು ವಿಶ್ವಾಸ ಗಳಿಸಿದೆ. ಜಗತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೆಚ್ಚು ಸಂಸದರು ಮತ್ತು ಶಾಸಕರನ್ನು ಹೊಂದಿದೆ. ಅತಿ ಹೆಚ್ಚು ರಾಜ್ಯಗಳ ಆಡಳಿತ ಹಿಡಿದಿದೆ’ ಎಂದು ಹೇಳಿದರು.

‘ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಎಲ್ಲ ರಂಗದ ಪ್ರಗತಿಗೂ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮನೆಗೂ ಶುದ್ಧ ನೀರು ದೊರೆಯುತ್ತಿದೆ’ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ. ಕಾರ್ಯದರ್ಶಿ ಬಿ.ಜಿ. ದೇಸಾಯಿ ಇದ್ದರು.

ಕಣಬರ್ಗಿಯಲ್ಲಿ ನಡೆದ ಯುವ ಸಂಕಲ್ಪ ಸಮಾವೇಶದಲ್ಲಿ ಸಿ.ಟಿ. ರವಿ, ಪಕ್ಷದ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಕೆ.ಸಿ. ಸಂದೀಪ್ ಕುಮಾರ್, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ‍ಪಾಟೀಲ, ಶಾಸಕ ಅನಿಲ ಬೆನಕೆ ಮತ್ತು ಮುಖಂಡರು ಪಾಲ್ಗೊಂಡರು.

ಕಾಂಗ್ರೆಸ್‌ನಿಂದ ಹಗರಣ:

ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ರವಿ, ‘ಎಲ್ಲರೂ ಭ್ರಷ್ಟಾಚಾರ ಮಾಡಬೇಕು ಎನ್ನುವುದು ಕಾಂಗ್ರೆಸ್‌ನವರ ಮನಸ್ಥಿತಿಯಾಗಿದೆ. ಏಕೆಂದರೆ, ಎಲ್ಲ ಹಗರಣಗಳೂ ಕಾಂಗ್ರೆಸ್ ಸರ್ಕಾರದಲ್ಲೇ ನಡೆದಿವೆ. ಕರ್ನಾಟಕದಲ್ಲಿ ಲೋಕಾಯುಕ್ತ ಮುಚ್ಚಿದ್ದು ಯಾರು? ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆದರು. ಆ ಪಕ್ಷಕ್ಕೆ ಕರ್ನಾಟಕವು ಎಂಟಿಎಂನಂತೆ ಆಗಿತ್ತು’ ಎಂದು ವಾಗ್ದಾಳಿ ನಡೆಸಿದರು.

‘ಕೋವಿಡ್ ಲಸಿಕೆಗೆ ವಿರೋಧ ಮಾಡಿದ ಆ ಪಕ್ಷದವರು ಸದ್ದಿಲ್ಲದೇ ಲಸಿಕೆ ಪಡೆದರು’ ಎಂದು ವ್ಯಂಗ್ಯವಾಡಿದರು.

‘ಸತೀಶ ಜಾರಕಿಹೊಳಿ ಅವರನ್ನು ಈ ಚುನಾವಣೆಯಲ್ಲಿ ಹರಕೆ ಕುರಿ ಮಾಡಿದ್ದಾರೆ’ ಎಂದು ವಿಶ್ಲೇಷಿಸಿದರು.

‘ದನ–ಕುರಿಗಳಂತೆ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರು’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ, ‘ದನ ಕುರಿಗಳನ್ನು ಅವರಿಗೆ ಹೋಲಿಸಿಕೊಳ್ಳುತ್ತಿದ್ದಾರಂತಾಯ್ತಲ್ಲ? ದನ ಕುರಿಗಳು ಅವರಗಿಂತಲೂ ಮೇಲೂ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT