ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜನರ ಮತ ಕೇಳಲು ಶೆಟ್ಟರ್‌ಗೆ ನೈತಿಕತೆ ಇಲ್ಲ

ಬೆಳಗಾವಿ ಲೋಕಸಲಾ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಹೇಳಿಕೆ
Published 27 ಏಪ್ರಿಲ್ 2024, 15:19 IST
Last Updated 27 ಏಪ್ರಿಲ್ 2024, 15:19 IST
ಅಕ್ಷರ ಗಾತ್ರ

ಸವದತ್ತಿ: ‘ಮುಖ್ಯಮಂತ್ರಿ, ಕೈಗಾರಿಕೆ ಮಂತ್ರಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಯತಹ ಪ್ರಬಲ ಅಧಿಕಾರದಲ್ಲಿದ್ದಾಗ ಬೆಳಗಾವಿಗೆ ಏನೂ ಮಾಡದೆ, ಬದಲಾಗಿ ಇಲ್ಲಿಗೆ ಬಂದಿದ್ದನ್ನೆಲ್ಲ ಕಿತ್ತುಕೊಂಡು ಹೋದ ಜಗದೀಶ ಶೆಟ್ಟರ್, ಈಗ ಮತದ ಆಸೆಗಾಗಿ ಬಂದು ಬೆಳಗಾವಿ ನನ್ನ ಕರ್ಮ ಭೂಮಿ ಎಂದರೆ ನಂಬಿ ಬೆಳಗಾವಿ ಜನರು ಮತ ಹಾಕಲು ಸಾಧ್ಯವೇ’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪ್ರಶ್ನಿಸಿದರು.

ಸವದತ್ತಿ ವಿಧಾನಸಭಾ ಕ್ಷೇತ್ರದ ನುಗ್ಗಾನಟ್ಟಿ, ಬೂದಿಗೊಪ್ಪ, ಯರಜರ್ವಿ, ಗೊರಗುದ್ದಿ, ಕಡಬಿ ಹಾಗೂ ಯರಗಟ್ಟಿಗಳಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ನಡೆಸಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಜನರ ಮತ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದರು.

‘ಬೆಳಗಾವಿ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿ, ಎಲ್ಲವನ್ನೂ ಹುಬ್ಬಳ್ಳಿಗೆ ಒಯ್ದರು. ಹೈಕೋರ್ಟ್ ಪೀಠ ಬೆಳಗಾವಿಯಲ್ಲಿ ಆಗಬೇಕೆಂದು ಹೆಚ್ಚು ಕಡಿಮೆ ನಿರ್ಧಾರವಾಗಿತ್ತು. ಆದರೆ ಅದನ್ನು ತಪ್ಪಿಸಿ ಧಾರವಾಡಕ್ಕೆ ಒಯ್ದರು. ಐಐಐಟಿ ಕಾಲೇಜನ್ನು ಬೆಳಗಾವಿಗೆ ಕೊಡಬಹುದಿತ್ತು. ಅವರು ಕೈಗಾರಿಕೆ ಸಚಿವರಿದ್ದಾಗ ಬೆಳಗಾವಿಯಲ್ಲಿ ಬಂಡವಾಳ ಹೂಡಿಕೆದಾರರ ಬೃಹತ್ ಸಮಾವೇಶ ಮಾಡಬೇಕೆಂದು ನಿರ್ಧಾರವಾಗಿತ್ತು. ಜಿಲ್ಲಾಧಿಕಾರಿಗಳು ಸಮಾವೇಶಕ್ಕೆ ಸಮಿತಿ ರಚನೆ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲೆ ಹೇಳದೆ ಕೇಳದೆ ಅದನ್ನು ಹುಬ್ಬಳ್ಳಿಗೆ ಶಿಫ್ಟ್ ಮಾಡಿದರು. ಇಂತಹ ವ್ಯಕ್ತಿಗೆ ಬೆಳಗಾವಿ ಹೇಗೆ ಕರ್ಮಭೂಮಿಯಾಗಲು ಸಾಧ್ಯ’ ಎಂದು ಮೃಣಾಲ್ ಹೆಬ್ಬಾಳಕರ ವಾಗ್ದಾಳಿ ನಡೆಸಿದರು.

‘ಬೆಳಗಾವಿ ಅಭಿವೃದ್ಧಿ ಬಗ್ಗೆ ಮಾತನಾಡುವುದು ಬಿಟ್ಟು ಮೋದಿ ನೋಡಿ ಮತ ಕೊಡಿ ಎನ್ನುತ್ತಾರೆ. ಅಂದರೆ ತಾವೇನೂ ಮಾಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಅವರೇ ಹೇಳುತ್ತಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ. ಅಂದರೆ ಚುನಾವಣೆ ಮುಗಿದ ನಂತರ ವಿಶ್ರಾಂತಿಗೆ ತೆರಳುವುದು ಪಕ್ಕಾ ಆಗಿದೆ. ಬಿಜೆಪಿಯೊಳಗೇ ಅವರಿಗೆ ಬೆಂಬಲ ಸಿಗುತ್ತಿಲ್ಲ. ಅವರಿಗೆ ಟಿಕೆಟ್ ನೀಡಿದ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಹಾಗಾಗಿ ಬೆಳಗಾವಿಯ ಜನರು ಈ ಬಾರಿ ಸ್ಥಳೀಯ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವ ಮೂಲಕ ನಿಮ್ಮೆಲ್ಲರ ಸಹಕಾರದೊಂದಿಗೆ ಬೆಳಗಾವಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸಿದರು.

‘ನಾನು ಬೆಳಗಾವಿಯಲ್ಲೇ ಹುಟ್ಟಿ ಬೆಳೆದವನು. ಇದು ನನ್ನ ಜನ್ಮಭೂಮಿ, ಕರ್ಮಭೂಮಿ ಎಲ್ಲವೂ. ನಮ್ಮ ಉದ್ಯಮಗಳೂ ಬೆಳಗಾವಿಯಲ್ಲೇ ಇವೆ. ಬೆಳಗಾವಿ ಜನರೇ ನನ್ನನ್ನು ಬೆಳೆಸಿದ್ದಾರೆ. ಎಂಜಿನಿಯರಿಂಗ್‌ ಪದವಿ ಮಾಡಿದ್ದೇನೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕಳೆದ 11 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವ ಮನಸ್ಸಿದೆ. ನಿಮ್ಮೆಲ್ಲರ ಸಲಹೆ, ಸಹಕಾರ ಪಡೆದು ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆ’ ಎಂದು ಮೃಣಾಲ್‌ ಭರವಸೆ ನೀಡಿದರು.

ಈ ಸಮಯದಲ್ಲಿ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ಆಯಾ ಗ್ರಾಮಗಳ ಹಿರಿಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT