ಬುಧವಾರ, ಸೆಪ್ಟೆಂಬರ್ 22, 2021
27 °C

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಅಧಿಸೂಚನೆ ನಾಳೆ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗೆ ₹ 3 ಲಕ್ಷ ಗರಿಷ್ಠ ವೆಚ್ಚ ಮಿತಿ ನಿಗದಿಪಡಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸ್ಪರ್ಧಿಸಲು ಬಯಸುವವರು ನಾಮಪತ್ರದೊಂದಿಗೆ ಠೇವಣಿ ಸಲ್ಲಿಸಬೇಕು. ಸಾಮಾನ್ಯ ವರ್ಗದವರು ₹ 5000 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು ಮತ್ತು ಮಹಿಳೆಯರಿಗೆ ₹ 2500 ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಒಬ್ಬ ಅಭ್ಯರ್ಥಿಯು ಅದೇ ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದರೆ ಹೆಚ್ಚಿನ ಠೇವಣಿ ಅಗತ್ಯವಿಲ್ಲ. ನಿಗದಿತ ಠೇವಣಿಯನ್ನು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗೆ ನಗದಾಗಿ ನೀಡಬಹುದು ಅಥವಾ ಸರ್ಕಾರಿ ಖಜಾನೆಯಲ್ಲಿ ಪಾವತಿಸಿದ ಬಗ್ಗೆ ರಸೀದಿಯನ್ನು ಲಗತ್ತಿಸಬೇಕು’ ಎಂದು ತಿಳಿಸಿದರು.

ಸೂಚಕರು:

‘ಮಾನ್ಯತೆ ಪಡೆದ ಅಭ್ಯರ್ಥಿಯಾಗಿದ್ದಲ್ಲಿ ನಾಮಪತ್ರದ ಜೊತೆ ಒಬ್ಬ ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ 6 ಜನ ಸೂಚಕರ ಸಹಿ ಕಡ್ಡಾಯವಾಗಿ ಇರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಮಹಾನಗರಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು. ನಾಮಪತ್ರಗಳನ್ನು ನಿಗದಿಪಡಿಸಿದ ದಿನಗಳಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಂಬಂಧಿಸಿದ ಚುನಾವಣಾ/ ಸಹಾಯಕ ಚುನಾವಣಾ ಅಧಿಕಾರಿಗೆ ಸಲ್ಲಿಸಬೇಕು. ಅಭ್ಯರ್ಥಿ ಒಳಗೊಂಡಂತೆ ಐವರು ಮಾತ್ರ ಚುನಾವಣಾ ಅಧಿಕಾರಿ ಪ್ರವೇಶಿಸಲು ಅವಕಾಶವಿದೆ’ ಎಂದು ವಿವರಿಸಿದರು.

‘ಒಟ್ಟು 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳು ಮತ್ತು ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು 1,826 ಸಿಬ್ಬಂದಿ ನೇಮಕ ಮಾಡಲಾಗುವುದು’ ಎಂದು ತಿಳಿಸಿದರು.

‘ಇವಿಎಂ, ಮಾದರಿ ನೀತಿಸಂಹಿತೆ, ದೂರು ನಿರ್ವಹಣಾ ವಿಷಯಗಳು, ತರಬೇತಿ, ಮಸ್ಟರಿಂಗ್–ಡಿ ಮಸ್ಟರಿಂಗ್ ಮತ್ತು ಎಣಿಕೆ ಕೇಂದ್ರಗಳ ವ್ಯವಸ್ಥೆ, ವರದಿಗಳು, ಚುನಾವಣಾ/ ವೆಚ್ಚ ವೀಕ್ಷಕರು, ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಣೆ ಹಾಗೂ ಮತಗಟ್ಟೆ ಸಿಬ್ಬಂದಿ ನೇಮಕಾತಿಗಾಗಿ 9 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದರು.

ಇವಿಎಂ, ನೋಟಾ:

‘ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ಬಳಸಲಾಗುವುದು. ನೋಟಾ (ಮೇಲಿನ ಯಾರೂ ಇಲ್ಲ) ಮತಕ್ಕೆ ಅವಕಾಶವಿದೆ. ಅಣಕು ಮತದಾನದ ಮೂಲಕ ಜಾಗೃತಿ ಮೂಡಿಸುವ ಕಾಲಕ್ಕೆ ನೋಟಾ ಬಗ್ಗೆಯೂ ತಿಳಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗುವುದು’ ಎಂದು ಹೇಳಿದರು.

‘ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ಚುನಾವಣಾ ಸಾಮಗ್ರಿಗಳನ್ನು ಹಂಚಿಕೆ ಮಾಡಲಾಗುವುದು ಮತ್ತು ಸಂಗ್ರಹಿಸಲಾಗುವುದು. ಕ್ಯಾಂಪ್‌ನ ಸಂತ ಜೋಸೆಫ್ ಕಾನ್ವೆಂಟ್ ಹಾಗೂ ಸಂತ ಪಾಲ್‌ ಶಾಲೆಯಲ್ಲಿ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು’.

‘ಪ್ರಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ನೀಡಲಾಗುವ ಮಾರ್ಗಸೂಚಿಗಳನ್ನು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನೂ ಅನುಸರಿಸಬೇಕು’ ಎಂದು ಸೂಚಿಸಿದರು.

‘ಆ. 16ರಂದು ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ಮಾದರಿ ನೀತಿಸಂಹಿತೆ ಜಾರಿಗೆ ಬರಲಿದೆ. ಎಲ್ಲ 58 ವಾರ್ಡ್‌ಗಳ ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿ ಕಚೇರಿಗಳನ್ನು ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳನ್ನೂ ಶೇ 100ರಷ್ಟು ಪರಿಶೀಲಿಸಿ, ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜುಲೈ 9ರಂದೇ ಪ್ರಚುರಪಡಿಸಲಾಗಿದೆ. ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಅಂಕಿ ಅಂಶ

4,28,364

ಒಟ್ಟು ಮತದಾರರು

2,13,526

ಪುರುಷರು

2,14838

ಮಹಿಳೆಯರು

402

ಮೂಲ ಮತಗಟ್ಟೆಗಳು

13

ಉಪ ಮತಗಟ್ಟೆಗಳು

415

ಒಟ್ಟು ಮತಗಟ್ಟೆಗಳು

12

ನೇಮಕವಾಗಿರುವ ಚುನಾವಣಾಧಿಕಾರಿಗಳು

12

ಸಹಾಯಕ ಚುನಾವಣಾಧಿಕಾರಿಗಳು

1,826

ಸಿಬ್ಬಂದಿ ನೇಮಕ

ಮಾರ್ಗಸೂಚಿ ಪಾಲನೆ

ಕೋವಿಡ್–19 ಮಾರ್ಗಸೂಚಿ ಅನ್ವಯ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ, ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲಾಗುವುದು.
–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು