ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ

Published 19 ಜನವರಿ 2024, 5:53 IST
Last Updated 19 ಜನವರಿ 2024, 5:53 IST
ಅಕ್ಷರ ಗಾತ್ರ

ಸಂಗೊಳ್ಳಿ (ಬೈಲಹೊಂಗಲ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ದಿನಗಳಕಾಲ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವ–2024ಕ್ಕೆ ಗುರುವಾರ ವೈಭವದ ತೆರೆ ಬಿದ್ದಿತು. ಎರಡನೇ ದಿನ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಪಂದ್ಯಗಳನ್ನು ಕಂಡು ಜನ ರೋಮಾಂಚನಗೊಂಡರು.

ರಾಯಣ್ಣ ವೇದಿಕೆಯಲ್ಲಿ ಇಡೀ ದಿನ ನಡೆದ ಸಂಗೀತ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳಿಗೆ ಮನಸೋಲದವರೇ ಇಲ್ಲ. ಬೆಳಿಗ್ಗೆ ಅಶೋಕ ಎಮ್ಮಿ ಅವರ ತಂಡ ಭಜನಾ ಪದಗಳನ್ನು ಪ್ರಸ್ತುತಪಡಿಸಿ ರಾಯಣ್ಣನ ತ್ಯಾಗ– ಬಲಿದಾನಗಳಿಗೆ ಕನ್ನಡಿ ಹಿಡಿಯಿತು. ಗ್ರಾಮೀಣ ಪ್ರದೇಶಗಳಿಂದ ಗುಂಪು ಗುಂಪಾಗಿ ಬಂದಿದ್ದ ಜನ ಭಜನಾ ಪದಗಳಲ್ಲಿ ರಾಯಣ್ಣನ ಶೂರತನವನ್ನು ಮನಗಂಡರು.

ಪಂಚಾಕ್ಷರಿ ಹಿರೇಮಠ ಅವರ ಸಂಗೀತವಂತೂ ಇನ್ನೂ ರಂಜಿಸಿತು. ರಾಜಕುಮಾರ ಸೂರ್ಯವಂಶಿ ತತ್ವಪದಗಳು, ಸನ್ನಿಂಗಪ್ಪ ಮೂಶನ್ನವರ ತಂಡದ ಡೊಳ್ಳಿನ ಪದಗಳು ಸಾಂ‍ಪ್ರದಾಯಿಕ ಕಲೆ– ಜೀವನ– ಸಂಸ್ಕೃತಿಯನ್ನು ಅನಾವರಣಗೊಳಿಸಿದವು. ನಂತರ ವೇದಿಕೆಗೆ ಬಂದ ಸುಧಾಕರ ಅವರು ಸುಗಮ ಸಂಗೀತದ ಮೂಲಕ ಹೊಸ ತಲೆಮಾರನ್ನೂ ರಂಜಿಸಿದರು.

ಪಾಂಡುರಂಗ ತಂಡದವರು ಪ್ರದರ್ಶಿಸಿದ ತೊಗಲು ಗೊಂಬೆ ಆಟವನ್ನು ಜನ ರೆಪ್ಪೆ ಮುಚ್ಚದಂತೆ ನೋಡಿದರು. ಗವಿಸಿದ್ದಯ್ಯ ಹುಳ್ಳಿಕೇರಿಮಠ ಲಾವಣಿ ಪದ, ಬನಶಂಕರಿ ಸಂಭ್ರಮ ಡಾನ್ಸ್ ತಂಡದ ನೃತ್ಯ ವೈವಿಧ್ಯ, ನಂದಕುಮಾರ ದೊಡವಾಡ ಗಾಯನ ಮೋಡಿ, ಶ್ರುತಿ ಪ್ಯಾಟಿ ತಂಡದ ಜನಪದ ಗೀತೆ, ಪ್ರಕಾಶ ತಂಡದ ಜೋಗತಿ ನೃತ್ಯಗಳು ಒಂದಕ್ಕಿಂತ ಒಂದು ಸೊಗಸಾಗಿ ಮೂಡಿಬಂದವು. ವರ್ಣಮಯ ವೇದಿಕೆಯಲ್ಲಿ ಈ ವಿವಿಧ ನೃತ್ಯ ರೂಪಕಗಳನ್ನು ಜನ ಇನ್ನಿಲ್ಲದಂತೆ ಆಕರ್ಷಿಸಿದರು.

ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘದ ಡೊಳ್ಳಿನ ಪದ, ಬೆಳಗಾವಿ ರೂಪಾ ಖಡಗಾವಿ ತತ್ವಪದ, ಸಂಗೊಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ನೃತ್ಯ ರೂಪಕ, ಆರಾಧ್ಯಾ ಸಂಪಗಾಂವ ನೃತ್ಯ, ಶಂಕರ ಬೆಣ್ಣೆ ತಂಡದ ಭಜನಾ ಪದ, ಯದಕುಮಾರ ತಂಡದ ನಾದಸ್ವರ, ಸಾಯಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ನೃತ್ಯ, ಚನ್ನಪ್ಪ ಕಾಂಬಳೆ ತಂಡದ ಜನಪದ ಗೀತೆ, ಪ್ರವೀಣ ಗಸ್ತಿ ತಂಡದ ನಗೆ ಹಬ್ಬ, ರಾಮು ಮೂಲಗಿ ಜನಪದ ಗೀತೆ, ಶಾರದಾ ಚಂಡೆ ಬಳಗದ ಚಂಡೆ ವಾದ್ಯ, ಸಂಜಯ ತಂಡದ ನೃತ್ಯ ವೈವಿಧ್ಯ ಗಮನ ಸೆಳೆದವು.

ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಬುಧವಾರ ರಾತ್ರಿ ಚಂಡೆಮೇಳದ ಕಲಾವಿದರು ಪ್ರದರ್ಶನ ನೀಡಿದರು
ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಬುಧವಾರ ರಾತ್ರಿ ಚಂಡೆಮೇಳದ ಕಲಾವಿದರು ಪ್ರದರ್ಶನ ನೀಡಿದರು
ರಂಜಿಸಿದ ಚಂದನಶೆಟ್ಟಿ ತಂಡ
ಬುಧವಾರ ತಡರಾತ್ರಿಯವರೆಗೂ ನಡೆದ ರಸಮಂಜರಿಯಲ್ಲಿ ಗಾಯಕ ಚಂದನಶೆಟ್ಟಿ ತಂಡದವರು ರಂಜಿಸಿದರು. ‘ಮಹಾಪ್ರಾಣ ದೀಪಂ ಶಿವಂ ಶಿವಂ...’ ಚಿತ್ರಗೀತೆ ಹಾಡುತ್ತಿದ್ದಂತೆಯೇ ವೇದಿಕೆ ಮುಂದಿದ್ದ ಜನ ತಲೆದೂಗಿದರು. ಗಾಯಕಿ ವಸುಶ್ರೀ ಸುಶ್ರಾವ್ಯವಾಗಿ ಹಾಡಿದ ‘ಎಲ್ಲಿ ಕಾಣೆ ಎಲ್ಲಿ ಕಾಣೆ ಯಲ್ಲಮ್ಮನಂತಾಕಿನ ಎಲ್ಲಿ ಕಾಣೆ ಎಲ್ಲಿ ಕಾಣೆ’ ಎಂಬ ರೇಣುಕಾದೇವಿ ಕುರಿತಾದ ಭಕ್ತಿ ಗೀತೆ ಕೇಳುಗರನ್ನು ಮಂತ್ರಮುಗ್ಧವಾಗಿಸಿತು. ಗಾಯಕಿ ಗೀತ ಹಾಡಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಹಾಡು  ತನ್ಮಯಗೊಳಿಸಿತು. ಗಾಯಕ ಚಂದನ ಶೆಟ್ಟಿ ಅವರು ‘ಕರಾಬು ಬಾಸು ಕರಾಬು’ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಅಂತಿದೆ’ ‘ಟಗರು ಟಗರು’ ಪಕ್ಕಾ ಚಾಕೊಲೇಟ್ ಗರ್ಲ್’ ಹಾಡುಗಳಿಗೆ ಯುವಪಡೆ ಕುಣಿದು ಕುಪ್ಪಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT