ಭಾನುವಾರ, ನವೆಂಬರ್ 28, 2021
19 °C

ಬೆಳಗಾವಿ: ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್ ಭೀತಿ ಹಾಗೂ ಆ ಸಾಂಕ್ರಾಮಿಕದ ಸಂಕಷ್ಟ ಮರೆಸಿ ಸಂಭ್ರಮದ ಹೊನಲು ಹರಿಸಿದ ಚನ್ನಮ್ಮನ ಕಿತ್ತೂರು ಉತ್ಸವ ಭಾನುವಾರ ರಾತ್ರಿ ಸಂಭ್ರಮದ ತೆರೆ ಕಂಡಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ಸಾವಿರಾರು ಜನರು ಭಾಗಿಯಾದರು. ಕೋವಿಡ್ ಕಾರಣದಿಂದಾಗಿ ಮೂರು ದಿನಗಳ ಬದಲಿಗೆ ಎರಡು ದಿನಗಳಿಗೆ ಮೊಟಕುಗೊಳಿಸಲಾಗಿತ್ತಾದರೂ ಜನರನ್ನು ಸೆಳೆಯುವಲ್ಲಿ ಉತ್ಸವ ಯಶಸ್ವಿಯಾಯಿತು. ಸಂಭ್ರಮ–ಸಡಗರಕ್ಕೆ ಪಾರವೇ ಇರಲಿಲ್ಲ. ಇದರೊಂದಿಗೆ ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಉತ್ತೇಜನ ನೀಡಿತು. ವ್ಯಾಪಾರಿಗಳ ಮೊಗದಲ್ಲಿ ಮಂದಹಾಸವನ್ನೂ ಮೂಡಿಸಿತು.

ಪ್ರತಿ ವರ್ಷ ಮೂರು ದಿನಗಳವರೆಗೆ ಉತ್ಸವ ಆಚರಿಸಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಸಾಂಕೇತಿಕವಾಗಿ ಹಾಗೂ ಸರಳವಾಗಿ ಉತ್ಸವ ನಡೆಸಲಾಗಿತ್ತು. ಈ ಬಾರಿ ಕುಸ್ತಿ ಹಾಗೂ ಕಬಡ್ಡಿ ಪಂದ್ಯಾವಳಿಗಳು ಇರಲಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ಬಹುತೇಕ ಕಾರ್ಯಕ್ರಮಗಳು ಇದ್ದವು. ಕಲಾತಂಡಗಳು ಉತ್ಸವದ ಮೆರುಗು ಹೆಚ್ಚಿಸಿದವು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬಂದು ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಮೆಚ್ಚುಗೆಗೆ ಪಾತ್ರವಾಗಿದೆ: ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ವೀರಜ್ಯೋತಿಯನ್ನು ರಾಜ್ಯದಾದ್ಯಂತ ಸಂಚರಿಸುವಂತೆ ಮಾಡಲು ಕ್ರಮ ವಹಿಸಲಾಗುವುದು. ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗುವುದು. ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಕಿತ್ತೂರು ಚನ್ನಮ್ಮನಿಗೆ ಸಂಬಂಧಿಸಿದ ವಸ್ತುಗಳನ್ನು ತರಲಾಗುವುದು ಎಂಬಿತ್ಯಾದಿ ಭರವಸೆಗಳನ್ನು ಮುಖ್ಯಮಂತ್ರಿ ನೀಡಿರುವುದು ಈ ಭಾಗದ ಜನರಲ್ಲಿ ಹೊಸ ಆಶಯಗಳನ್ನು ಮೂಡಿಸಿದೆ. ಉತ್ಸವಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಧಿಕ್ಕರಿಸಿ ಬಂದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕಲಾತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಶ್ರೀಮಂತಿಕೆ ಅನಾವರಣಗೊಳಿಸಿದವು. ವಿವಿಧ ವಿಷಯಗಳ ವಿಚಾರಸಂಕಿರಣ, ಗೋಷ್ಠಿಗಳು ಕಿತ್ತೂರು ಸಂಸ್ಥಾನದ ಇತಿಹಾಸದ ಮೇಲೆ ಬೆಳಕು ಚೆಲ್ಲಿದವು. ಆಗಿರುವ, ಆಗಬೇಕಿರುವ ಕಾರ್ಯಗಳ ಬಗ್ಗೆ ತಜ್ಞರು ಗಮನಸೆಳೆದರು. ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಸೈಕ್ಲಿಂಗ್ ಸ್ಪರ್ಧೆ, ವಾಲಿಬಾಲ್ ಟೂರ್ನಿಗಳು ನಡೆದವು. ಬಿರು ಬಿಸಿಲಿನಲ್ಲೂ ನೂರಾರು ಜನರು ಉತ್ಸಾಹದಿಂದ ವೀಕ್ಷಿಸಿ ಕ್ರೀಡಾಪಟುಗಳಲ್ಲಿ ಹುರುಪು ತುಂಬಿದರು. ಗೋಷ್ಠಿಗಳಲ್ಲೂ ಜನರಿದ್ದದ್ದು ಈ ಬಾರಿಯ ವಿಶೇಷವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ ಅವರ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಯಿತು. ವಸ್ತುಪ್ರದರ್ಶನದಲ್ಲೂ ಜನರಿದ್ದರು.

ಖರೀದಿ ಭರಾಟೆ: ಕೋವಿಡ್ 3ನೇ ಅಲೆಯ ಭೀತಿ ಆವರಿಸಿರುವುದರಿಂದ ಉತ್ಸವಕ್ಕೆ ಜನರು ಬರುತ್ತಾರೆಯೋ ಇಲ್ಲವೋ ಎಂಬ ಅನುಮಾನ ಉಂಟಾಗಿತ್ತು. ಆದರೆ, ಎರಡೂ ದಿನ ಸಾವಿರಾರು ಜನರು ಬಂದು ಖುಷಿಪಟ್ಟರು. ಕೋಟೆಗೆ ಮಾಡಿದ್ದ ವಿದ್ಯುದ್ದೀಪಾಲಂಕಾರ ಸ್ಥಳದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಭಾನುವಾರವೂ ಕೋಟೆ ಆವರಣ ಜನಜಂಗುಳಿಯಿಂದ ಕೂಡಿತ್ತು. ಹೊರಾಂಗಣದಲ್ಲಿ ಹಾಕಿದ್ದ ಹಲವು ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಜನರು ಕುಟುಂಬ ಸಮೇತ ಪಾಲ್ಗೊಂಡು ವಾರಾಂತ್ಯವನ್ನು ಕಳೆದರು.


ಕಿತ್ತೂರಿನಲ್ಲಿ ನಡೆದ ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಇಮಾಮಸಾಬ ವಲ್ಲೇಪ್ಪನವರ ತಂಡದವರು ಭಾವೈಕ್ಯ ಜನಪದ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು