ಸೋಮವಾರ, ಮಾರ್ಚ್ 20, 2023
24 °C

ರಮೇಶ ಜಾರಕಿಹೊಳಿ ವಿರುದ್ಧ ಕಿಡಿ ಕಾರಿದ ಚನ್ನರಾಜ ಹಟ್ಟಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಹಗುರವಾಗಿ ಮಾತನಾಡುವ ಚಟವಿದೆ. ಆದರೆ, ಸಾರ್ವಜನಿಕರ ಮಧ್ಯೆ ಇರುವವರಿಗೆ ಮಾತಿನ ಮೇಲೆ ನಿಗಾ ಇರಬೇಕು. ಬೇರೊಬ್ಬರ ಮೇಲೆ ವೈಯಕ್ತಿಕ ಆರೋಪ ಮಾಡುವ ಮುನ್ನ ಎಚ್ಚರಿಕೆ ಇರಬೇಕು’ ಎಂದು ವಿಧಾನ ಪರಿಷತ್ ಸದಸ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಹೇಳಿದರು.

‘ರಮೇಶ ಅವರು ಯಾವ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂಬ ಸ್ಪಷ್ಟತೆ ಇಲ್ಲ. ಏನು ಮಾತನಾಡುತ್ತಿದ್ದೇನೆ ಎಂಬ ಅರ್ಥವೂ ಅಲ್ಲ. ಬರೀ ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು  ನೀಡಿದರು.

‘ಶಾಸಕರ ಬಗ್ಗೆ ಅವರು ಕೀಳುಪದ ಬಳಸಿದ್ದಾರೆ. ನಾನು ಮತ್ತು ನನ್ನ ಅಕ್ಕ ಸುಶಿಕ್ಷಿತರಿದ್ದೇವೆ. ರಮೇಶ ಅವರಂತೆ ಅಸಂಬದ್ಧ ಪದ ಬಳಸುವುದಿಲ್ಲ. ಬೇಜವಾಬ್ದಾರಿ ಮಾತನಾಡುವ ಬದಲು ಜನರ ಮುಂದೆ ದಾಖಲೆ ಇಟ್ಟುಬಿಡಿ’ ಎಂದೂ ಹೇಳಿದರು.

‘ಅವರ ಸಿ.ಡಿ ಹೊರಬಿದ್ದು ಎರಡು ವರ್ಷವಾಗಿದೆ. ಇಲ್ಲಿಯವರೆಗೆ ಸಿಬಿಐಗೆ ಒಪ್ಪಿಸಿಲ್ಲ. ಈಗ ಏಕೆ ತಾವೇ ಮುಂದೆ ಬಂದು ಸಿಬಿಐಗೆ ಒಪ್ಪಿಸಲು ಹೇಳುತ್ತಿದ್ದಾರೆ? ಚುನಾವಣೆ ಬಂದಾಗ ಇಂಥ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಬಿಜೆಪಿ ರೂಢಿ’ ಎಂದೂ ಆರೋಪಿಸಿದರು.

‘ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಬಿಡುವಾಗ ನಮ್ಮನ್ನೂ ಕರೆದರು. ಆದರೆ, ನಾವು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದೆವು. ಬಿಜೆಪಿ ಸೇರಬೇಡಿ ಎಂದು ಅವರಿಗೂ ಕೇಳಿಕೊಂಡೆವು. ಆಗ ಅವರ ಮಾತಿಗೆ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕೆ ನಮ್ಮ ಮೇಲೆ ಇಷ್ಟು ದ್ವೇಷ ಸಾಧಿಸುತ್ತಿದ್ದಾರೆ’ ಎಂದರು.

‘ನಮ್ಮ ಹರ್ಷ ಶುಗರ್ಸ್‌ಗೆ ವ್ಯವಹಾರಗಳು ಪಾರದರ್ಶಕವಾಗಿವೆ. ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಅವರ ಆರೋಪದಲ್ಲಿ ಸತ್ಯವಿಲ್ಲ. ಆದರೆ, ರಮೇಶ ಅವರ ಒಡೆತನದ ಸೌಭಾಗ್ಯಲಕ್ಷ್ಮೀ ಶುಗರ್ಸ್‌ನ ದಾಖಲೆಗಳು ಇಲ್ಲ. ಎಥೆನಾಲ್‌ ಘಟಕ ಪ್ರಾಂಭಿಸುತ್ತೇನೆ ಎಂದು ಹೇಳಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ್ದಾರೆ. ದಿವಾಳಿ ಆಗಿದ್ದೇವೆ ಎಂದು ಇವರೇ ಬ್ಯಾಂಕಿಗೆ ಬರೆದುಕೊಟ್ಟಿದ್ದಾರೆ’ ಎಂದೂ ಆರೋಪಿಸಿದರು.

‘ಕುಂಬಳಕಾಯಿ ಕಳ್ಳ’

‘ರಾಣಿ ಚನ್ನಮ್ಮನ ಬಗ್ಗೆ ರಮೇಶ ಜಾರಕಿಹೊಳಿ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ಯಾವುದೂ ಆಡಿಯೊ ನಮ್ಮ ಬಳಿ ಇಲ್ಲ. ಕುಂಬಳಕಾಯಿ ಕಳ್ಳನಂತೆ ತಾವೇ ಸಿಕ್ಕಿಬಿದ್ದಿದ್ದಾರೆ. ಯಾರದೋ ಜತೆಗೆ ಮಾತಾಡುವಾಗಿ ರಾಣಿ ಚನ್ನಮ್ಮನ ಬಗ್ಗೆ ಹಗುರವಾಗಿ ಪದ ಬಳಸಿರಬಹುದು. ಅದು ರೆಕಾರ್ಡ್‌ ಆಗಿದೆ ಎಂಬ ಕಾರಣಕ್ಕೆ ಮುಂಚಿತವಾಗಿಯೇ ನಮ್ಮ ಮೇಲೆ ಆರೋಪ ಹೇರಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಕೆಟ್ಟ ಪದ ಬಳಸಿದ್ದೇನೆ, ಅದನ್ನೇ ಎಡಿಟ್ ಮಾಡಿ ಚನ್ನಮ್ಮನ ಹೆಸರಿಗೆ ಅಂಟಿಸಿದ್ದಾರೆ ಎಂದು ರಮೇಶ ಹೇಳಿದ್ದಾರೆ. ತಮ್ಮ ವಿರುದ್ಧದ ಆಡಿಯೊಗಳು ಎಡಿಟ್‌ ಮಾಡಿದವು, ತಾವು ಬೇರೊಬ್ಬರ ಮೇಲೆ ಪ್ರಯೋಗಿಸುತ್ತಿರುವ ಆಡಿಯೊಗಳು ಮಾತ್ರ ಒರಿಜಿನಲ್‌ ಆಗಿವೆಯೇ?’ ಎಂದೂ ಚನ್ನರಾಜ ಪ್ರಶ್ನಿಸಿದರು.

‘ತಮಗೆ ವಾಟ್ಸ್‌ಆ್ಯಪ್‌ ಬಳಸಲು ಬರುವುದಿಲ್ಲ, ಹಾಗಾಗಿ ದಾಖಲೆ ತೋರಿಸಲು ಆಗುತ್ತಿಲ್ಲ ಎಂದು ರಮೇಶ ಅವರು ಹೇಳಿದ್ದಾರೆ. ಅವರು ಎಷ್ಟು ಚೆನ್ನಾಗಿ ವಾಟ್ಸ್‌ಆ್ಯಪ್‌ ಬಳಸಬಲ್ಲರು ಎನ್ನುವುದನ್ನು ಇಡೀ ರಾಜ್ಯದ ಜನ ಒಂದೂವರೆ ವರ್ಷದ ಹಿಂದೆಯೇ ನೋಡಿದ್ದಾರೆ’ ಎಂದೂ ಮೂದಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು