ಶುಕ್ರವಾರ, ಮೇ 14, 2021
32 °C
ಉಪ ಚುನಾವಣೆ: ಮುಖ್ಯಮಂತ್ರಿಯಿಂದ ಮುಂದುವರಿದ ಮತ ಬೇಟೆ

ಬೆಳಗಾವಿಯಲ್ಲಿ ಸಿಎಂ ಮತ ಬೇಟೆ: ಮಠಗಳಿಗೆ ಭೇಟಿ, ರೋಡ್‌ ಷೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಲೋಕಸಭಾ ‌ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿ ಮತ ಯಾಚಿಸಿದರು.

ಶಿವಾಜಿ ಉದ್ಯಾನ ಬಳಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಮುರುಗೇಶ ನಿರಾಣಿ, ಉಮೇಶ ಕತ್ತಿ, ಶ್ರೀಮಂತ ಪಾಟೀಲ, ಶಾಸಕ ಅಭಯ ಪಾಟೀಲ ಪಾಲ್ಗೊಂಡಿದ್ದರು. ನೂರಾರು ಮಂದಿ ಕಾರ್ಯಕರ್ತರು ದ್ವಿಚಕ್ರವಾಹನದಲ್ಲಿ ಭಾಗವಹಿಸಿದ್ದರು. ವಿವಿಧ ರಸ್ತೆಗಳಲ್ಲಿ ಸಾಗಿತು. ಅನಾರೋಗ್ಯದಿಂದಾಗಿ (ಜ್ವರ ಹಾಗೂ ಸುಸ್ತು) ಯಡಿಯೂರಪ್ಪ ಅವರು ರೋಡ್ ಷೋ ಮೊಟಕುಗೊಳಿಸಿ, ತಾವು ತಂಗಿದ್ದ ಯುಕೆ–27 ಹೋಟೆಲ್‌ಗೆ ವಾಪಸಾಗಿ ವಿಶ್ರಾಂತಿ ಪಡದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠ ಹಾಗೂ ಲಕ್ಷ್ಮಿಟೇಕ್‌ನಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಹುಕ್ಕೇರಿ ಮಠದಲ್ಲಿ ಹೋಮ

ಹುಕ್ಕೇರಿ ಮಠದಲ್ಲಿ ಕೋವಿಡ್ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿ ಸುದರ್ಶನ ಹೋಮ–ಹವವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ಸಮಾಜದ ಉದ್ದಾರಕ್ಕೆ ಸ್ವಾಮೀಜಿಗಳು ತೊಡಗಿಸಿಕೊಂಡಿದ್ದೀರಿ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಆಗಬೇಕು ಎಂದು ಕೋಟ್ಯಂತರ ಜನರು ಆಸೆ ಪಟ್ಟಿದ್ದರು. ಅದರಂತೆ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಮಮಂದಿರ ನಿರ್ಮಾಣ ಆಗುತ್ತಿದೆ. ಮಂದಿರ ನಿರ್ಮಾಣಕ್ಕೆ ಈವರೆಗೆ ₹ 2,500 ಕೋಟಿಯನ್ನು ಜನರು ನೀಡಿದ್ದಾರೆ. ರಾಮನ ಮೇಲಿನ ಅಭಿಮಾನ, ಭಕ್ತಿಯನ್ನು ಈ ಮೂಲಕ ತೋರಿಸಿದ್ದಾರೆ’ ಎಂದರು.

‘ಮಠಾಧೀಶರು ಹಾಗೂ ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರಾಜ್ಯವನ್ನು ಇನ್ನೆರಡು ವರ್ಷಗಳಲ್ಲಿ ಮಾದರಿ ರಾಜ್ಯವಾಗಿ ಪರಿವರ್ತಿಸುತ್ತೇನೆ. ಧರ್ಮ ಪ್ರಜ್ಞೆ, ಸಮಾಜ ಪ್ರಜ್ಞೆ, ರಾಷ್ಟ್ರ ಕಟ್ಟುವ ಪ್ರಜ್ಞೆಯನ್ನು ಪೂಜ್ಯರು ಮೂಡಿಸುತ್ತಿದ್ದಾರೆ’ ಎಂದು ತಿಳಿಸಿದರು.

ಆಶೀರ್ವಾದ ಮಾಡಿ

‘ಕೋವಿಡ್ ನಮ್ಮನ್ನು ಕಾಡುತ್ತಿದೆ. ಅದನ್ನು ದೂರವಾಗಿಸಲು ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು. ಸದೃಢ ರಾಜ್ಯ ಕಟ್ಟಲು, ಅಭಿವೃದ್ಧಿಗೆ ಆಶೀರ್ವಾದ ಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ನಗರಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಮತ್ತೊಮ್ಮೆ ಸಭೆ ನಡೆಸಿ, ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕೇಂದ್ರ ‌ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಮುಖ್ಯಮಂತ್ರಿಯಾಗಿ ಎಲ್ಲ ಧರ್ಮವನ್ನೂ ಸಮಾನವಾಗಿ ಗೌರವಿಸಿದವರು ಯಡಿಯೂರಪ್ಪ ಮಾತ್ರ. ಆರ್.ಎಸ್.ಎಸ್. ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ಅವರು, ಎಂದಿಗೂ ರಾಜಕಾರಣಕ್ಕಾಗಿ ಮಠಗಳಿಗೆ ಅನುದಾನ ನೀಡಲಿಲ್ಲ’ ಎಂದರು.

‘ಅವರ ನೇತೃತ್ವದಲ್ಲಿ ಬೆಳಗಾವಿಯು ಸಜ್ಜನ, ಸುಸಂಸ್ಕೃತ ಜಿಲ್ಲೆಯಾಗಿ ಮುಂದುವರಿಯುವುದು ನಿಮ್ಮ (ಶ್ರೀಗಳ) ಕೈಯಲ್ಲಿ ಇದೇ. ರಾಜಕಾರಣದಲ್ಲಿ ಸಜ್ಜನಿಕೆ ಇರಬೇಕು. ಗೂಂಡಾ ಸಂಸ್ಕೃತಿ ಮತ್ತು ಧಮನಕಾರಿ ಪ್ರವೃತ್ತಿಗೆ ಅವಕಾಶ ಕೊಡಬಾರದು. ಈ ಹಿನ್ನೆಲೆಯಲ್ಲಿ ಯಾವ ರೀತಿ ಆಶೀರ್ವದಿಸಬೇಕು ಎನ್ನುವುದು  ಶ್ರೀಗಳಿಗೆ ಗೊತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ‌ಸ್ವಾಮೀಜಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಮಠಗಳ ಸ್ವಾಮೀಜಿಗಳನ್ನು ಮಠಕ್ಕೆ ಆಹ್ವಾನಿಸಿದ್ದರು. ಅವರೆಲ್ಲರೂ ಮುಖ್ಯಮಂತ್ರಿಯನ್ನು ಸತ್ಕರಿಸಿದರು. ಬಳಿಕ ಪ್ರಮುಖ ಸ್ವಾಮೀಜಿಗಳೊಂದಿಗೆ ಗೋಪ್ಯ ಸಭೆ ನಡೆಸಿದ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮತ್ತು ಭಕ್ತರಿಗೂ ಈ ಸಂದೇಶ ನೀಡುವಂತೆ ಕೋರಿದರು ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು