ಶನಿವಾರ, ಸೆಪ್ಟೆಂಬರ್ 25, 2021
28 °C

ಬೆಳಗಾವಿ: ಬಾಕಿ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಳೆದ ಬಾರಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಮನೆ ಹಾನಿಯ ಬಾಕಿ ಪರಿಹಾರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದರು.

ಅತಿವೃಷ್ಟಿ, ಪ್ರವಾಹ ನಿರ್ವಹಣೆ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ನಡೆದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಾರದಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ‌ ನಿರ್ವಹಣೆಗೆ ನಿಗಾ ವಹಿಸಬೇಕು. 2-3 ದಿನಗಳಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಪರಿಸ್ಥಿತಿ ನಿರ್ವಹಣೆಗೆ ಎಲ್ಲ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 113 ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜನರ ತುರ್ತು ರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗಾಗಿ 89 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜನರ ಕಷ್ಟಗಳನ್ನು ಅರಿತು ಜಿಲ್ಲಾಡಳಿತ ಸಂವೇದನೆಯಿಂದ ಕೆಲಸ ಮಾಡಬೇಕು’ ಎಂದರು.

ಅನುದಾನ ಹೆಚ್ಚಳಕ್ಕೆ ಮನವಿ: ಕಂದಾಯ ಸಚಿವ ಆರ್.ಅಶೋಕ್‌, ‘ಪ್ರವಾಹ ಸಂದರ್ಭದಲ್ಲಿ ತುರ್ತು ಔಷಧಿ ಮತ್ತಿತರ ಸಾಮಗ್ರಿಗಳನ್ನು ಎನ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಸಬೇಕು. ಅನುದಾನ ಹೆಚ್ಚಿಸುವಂತೆ ಕೋರಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

‘ಪ್ರವಾಹದಿಂದ ಕೊಚ್ಚಿ ಹೋಗಿರುವ ಜಾನುವಾರುಗಳ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಿಸಬೇಕು. ಆಲಮಟ್ಟಿ ಜಲಾಶಯದ ಒಳಹರಿವು ಆಧರಿಸಿ ನೀರು ಬಿಡುಗಡೆ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

ನಾಲೆಗಳ ನಿರ್ಮಾಣಕ್ಕೆ ಒತ್ತಾಯ: ‘ಬೆಳಗಾವಿ ನಗರದ ಸುತ್ತಮುತ್ತ ನಾಲೆಗಳನ್ನು ನಿರ್ಮಿಸುವ ಅಗತ್ಯವಿದೆ’ ಎಂದು ಶಾಸಕ ಅನಿಲ್ ಬೆನಕೆ ಒತ್ತಾಯಿಸಿದರು.

‘ಕುಡಚಿ ಮತಕ್ಷೇತ್ರದ ಶಿರವಾರ ಹಾಗೂ ಗುಂಡವಾಡ ಗ್ರಾಮಗಳ 350 ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಬೇಕು’ ಎಂದು ಕುಡಚಿ ಶಾಸಕ ಪಿ‌.ರಾಜೀವ ಕೋರಿದರು.

‘ಜ್ವರಕ್ಕೆ ಸಂಬಂಧಿಸಿದ ಪ್ಯಾರಾಸಿಟಮಲ್ ಲಭ್ಯವಿಲ್ಲ; ಮೇವು ಸಂಗ್ರಹಣೆ ಕೂಡ ಇಲ್ಲ. ಈ ಬಗ್ಗೆ ಗಮನಹರಿಸಬೇಕು’ ಎಂದು ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಒತ್ತಾಯಿಸಿದರು.

ಜವಳಿ ಸಚಿವ ಶ್ರೀಮಂತ ಪಾಟೀಲ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ಅಭಯ ಪಾಟೀಲ, ಗಣೇಶ ಹುಕ್ಕೇರಿ, ಮಹಾದೇವಪ್ಪ ಯಾದವಾಡ, ಡಿ.ಎಂ. ಐಹೊಳೆ, ಮಹಾಂತೇಶ ಕೌಜಲಗಿ, ವಿಧಾನಪರಿಷತ್ ಸದಸ್ಯ ಸಾಬಣ್ಣ ತಳವಾರ, ಕಾಡಾ ಅಧ್ಯಕ್ಷ ಡಾ.ವಿ.ಐ. ಪಾಟೀಲ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉಪಸ್ಥಿತರಿದ್ದರು.

₹ 1,200 ಕೋಟಿ ಹಾನಿ: ಕಾರಜೋಳ

‘ಬೆಳಗಾವಿ ವಿಭಾಗದಲ್ಲಿ 1,400 ಕಿ.ಮೀ. ರಸ್ತೆ, 305 ಸೇತುವೆ ಹಾನಿ ಸೇರಿ ಒಟ್ಟಾರೆ ₹ 1200 ಕೋಟಿ ಹಾನಿಯಾಗಿದೆ. ತಕ್ಷಣ ದುರಸ್ತಿಗೆ ₹ 170 ಕೋಟಿ ಬಿಡುಗಡೆ ಮಾಡಬೇಕು’ ಎಂದು ಗೋವಿಂದ ಕಾರಜೋಳ ಕೋರಿದರು.‌

‘ಕೃಷ್ಣಾ ನದಿಯಲ್ಲಿ ಈಗಲೂ ನೀರಿನ ಹರಿವು ಜಾಸ್ತಿ ಇರುವುದರಿಂದ ಆಲಮಟ್ಟಿ ಜಲಾಶಯದಿಂದ‌ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬೇಕು. ಜನರ ತುರ್ತು ರಕ್ಷಣೆಗೆ ಬೋಟ್‌ಗಳನ್ನು ನದಿ ತೀರದ ಗ್ರಾಮಗಳಿಗೆ ಒದಗಿಸಬೇಕು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

‘ಹಾನಿಗೊಳಗಾದ ಮನೆಗಳ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಬೇಕು. ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಆದ್ಯತೆ ಮೇರೆಗೆ ಪರಿಹಾರ ಕೊಡಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಒತ್ತಾಯಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಕಳೆದ ಬಾರಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಹಾಗೂ ಸೇತುವೆಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಒದಗಿಸಬೇಕು’ ಎಂದು ಕೋರಿದರು.

‘ಅಥಣಿ ಕ್ಷೇತ್ರದಲ್ಲಿ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ತಕ್ಷಣ ಅನುದಾನ ಒದಗಿಸಬೇಕು. ಪರಿಹಾರ ನೀಡುವ ಜೊತೆಗೆ ಮನೆ ನಿರ್ಮಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

***

ಸಂವೇನೆಯಿಂದ ಕೆಲಸ ಮಾಡಬೇಕು

ಕೋವಿಡ್ ಸಂಕಷ್ಟದ ಮಧ್ಯೆಯೇ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಜಿಲ್ಲಾಡಳಿತ ಸಂವೇದನೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಏನೇ ತೊಂದರೆ ಇದ್ದರೂ ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ಸರಿಪಡಿಸಬೇಕು.

–ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು