ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು: ಕಲ್ಲೆದ್ದ ರಸ್ತೆಯಲ್ಲೇ ಮಕ್ಕಳ ನಡಿಗೆ!

Published 12 ಜೂನ್ 2024, 5:13 IST
Last Updated 12 ಜೂನ್ 2024, 5:13 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಾಲು ದಾರಿ ಮೇಲೆ ಮುಷ್ಟಿಗಾತ್ರದ ಚೂಪನೆಯ ಕಲ್ಲುಗಳು ಎದ್ದು ಕುಳಿತಿವೆ. ಸ್ಮಶಾನಕ್ಕೂ ಇದೇ ದಾರಿ ಅವಲಂಬನೆ. ಮಳೆಯಾದರೆ ಸಾಕು ಮನೆಯೊಳಗೆ ನೀರು ನುಗ್ಗಿ ಬದುಕೇ ಯಾತನಾಮಯ ಆಗುತ್ತದೆ.

ಇದು ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿಮ್ಮಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿ ಮಕ್ಕಳು ಮತ್ತು ನಾಗರಿಕರ ಗೋಳು.

‘ಕಾಲೊನಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಮಕ್ಕಳು ರಸ್ತೆ ಮೇಲೆ ಎದ್ದು ಕುಳಿತಿರುವ ಕಲ್ಲುಗಳನ್ನು ತಪ್ಪಿಸಿಕೊಳ್ಳುತ್ತ ಸಾಗಬೇಕು. ಕಾಲೊನಿಯಲ್ಲಿ ಯಾರಾದರೂ ಮೃತಪಟ್ಟರೆ ಇದೇ ದಾರಿಯಲ್ಲಿ ಸಾಗಿ,  ಶಾಲೆ ಬಳಿಯ ಸ್ಮಶಾನಭೂಮಿ ತಲುಪಬೇಕು. ಹದಗೆಟ್ಟ ರಸ್ತೆಯಿಂದ ಮಕ್ಕಳು ಮತ್ತು ನಾಗರಿಕರಿಗೆ ತೀವ್ರ ತೊಂದರೆಯಾಗಿದೆ. ಜನಪ್ರತಿನಿಧಿಗಳು ಇಲ್ಲಿ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

4 ದಶಕದ ಹಿಂದೆ ನಿರ್ಮಾಣ:

‘ಸರ್ಕಾರದ ಗುಂಪು ವಸತಿ ಯೋಜನೆಯಡಿ 4 ದಶಕದ ಹಿಂದೆ ನಿರ್ಮಾಣವಾದ ಈ ಕಾಲೊನಿಯಲ್ಲಿ 45 ಕುಟುಂಬ ವಾಸವಾಗಿವೆ. ಕುಡಿಯುವ ನೀರಿನ ಸೌಕರ್ಯ ಹಾಗೂ ಆಯ್ದ ಕಡೆ ಕಾಂಕ್ರಿಟ್‌ ರಸ್ತೆಯಿಂದ ಅನುಕೂಲವಾಗಿದೆ. ಆದರೆ, ಜೋರು ಮಳೆಯಾದರೆ ನಮ್ಮ ಕಾಲೊನಿಯ ಮನೆಯೊಳಗೆ ನೀರು ನುಗ್ಗುತ್ತಿದೆ. ರಾತ್ರಿ ಮಳೆಯಾದರೆ ನಿದ್ರೆಯಿಲ್ಲದೆ ಕುಳಿತುಕೊಳ್ಳುವಂತಾಗಿದೆ’ ಎಂಬ ಅಳಲು ಗ್ರಾಮಸ್ಥರದ್ದು. ‘ಮೂಲಸೌಲಭ್ಯ ಪರವಾಗಿಲ್ಲ ಎಂಬ ತೃಪ್ತಿ ನಮ್ಮಲ್ಲಿದೆ. ಆದರೆ, ಮಳೆಗಾಲದಲ್ಲಿ ಇಲ್ಲಿಯ ಕುಟುಂಬಗಳ ಬದುಕು ತೀರಾ ಹದಗೆಟ್ಟು ಹೋಗುತ್ತದೆ. ಇಡೀ ಮರಡಿ ನೀರು ನಮ್ಮ ಬೀದಿಯಲ್ಲಿ ಅಡ್ಡಲಾಗಿ ಹರಿದು ಹೋಗಬೇಕು. ಹೆಚ್ಚು ನೀರು ನುಗ್ಗಿ ಬರುವುದರಿಂದ ಈ ನೀರು ಚರಂಡಿಯೊಳಗೆ ಹೋಗದೆ, ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಸಮಸ್ಯೆ ಇದ್ದೇ ಇದೆ’ ಎನ್ನುತ್ತಾರೆ ಗ್ರಾಮಸ್ಥ ರಾಜು ಮನ್ನಪ್ಪನವರ.

‘ಸರ್ಕಾರದಿಂದ ಸ್ಮಶಾನಭೂಮಿಗೆ ಜಾಗ ನೀಡಲಾಗಿದೆ. ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಧಾರಣೆ ಮಾಡುವ ಗೋಜಿಗೆ ಹೋಗಿಲ್ಲ. ಖಾಸಗಿಯವರ ಮಾಲೀಕತ್ವದಲ್ಲಿರುವ ಹೊಲದಲ್ಲಿ ಹಾಯ್ದು ಹೋಗಬೇಕಿದೆ. ಈ ತೊಂದರೆಯನ್ನು ಸರ್ಕಾರ ತುರ್ತಾಗಿ ಪರಿಹರಿಸಬೇಕಿದೆ’ ಎಂದು ನಿವಾಸಿಗಳು ಆಗ್ರಹಿಸಿದರು.

ಅಂಬೇಡ್ಕರ್ ಕಾಲೊನಿ ಪೂರ್ವಭಾಗದ ಮನೆಗಳ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಇನ್ನೂ 30 ಅಡಿಯವರೆಗೆ ಕಾಂಕ್ರೀಟ್‌ ಚರಂಡಿ ನಿರ್ಮಾಣವಾದರೆ ಅನುಕೂಲವಾಗುತ್ತದೆ.
ರಾಜು ಮನ್ನಪ್ಪನವರ, ನಿವಾಸಿ, ಅಂಬೇಡ್ಕರ್ ಕಾಲೊನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT