ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೇಶ್ವರ: ಕನ್ನಡ ನೆಲ-ಜಲ ರಕ್ಷಣೆಗೆ ಬದ್ಧ ಎಂದ ಬೊಮ್ಮಾಯಿ

ಮುಖ್ಯಮಂತ್ರಿಯಿಂದ ಬಸ್ ನಿಲ್ದಾಣ ಉದ್ಘಾಟನೆ
Last Updated 25 ಸೆಪ್ಟೆಂಬರ್ 2021, 17:03 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ನೆಲ-ಜಲ‌‌ ಹಾಗೂ‌ ಜನರ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಅಭಿವೃದ್ಧಿ, ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ₹4 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಹಾಗೂ ಎಸ್.ಎಫ್.ಸಿ. ₹ 3.50 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಪುರಸಭೆ ಕಟ್ಟಡವನ್ನು ಶನಿವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಸೂಕ್ತ ವ್ಯವಸ್ಥೆ ಲಭ್ಯವಾದರೆ ರಾಜ್ಯದಲ್ಲಿ ವಿದ್ಯುತ್ ‌ವಿತರಣೆ ವ್ಯವಸ್ಥೆ ವಿಕೇಂದ್ರೀಕರಣಕ್ಕೆ ಸರ್ಕಾರ‌ ಸಿದ್ಧವಿದೆ ಎಂದು ತಿಳಿಸಿದರು.

ಸೇವೆಗಳ ವಿಕೇಂದ್ರೀಕರಣ:ಜನವರಿ 26ರಿಂದ ಐದು‌ ಜಿಲ್ಲೆಗಳಲ್ಲಿ ಸರ್ಕಾರದ ಪ್ರತಿಯೊಂದು ಸೇವೆಗಳನ್ನೂ ಗ್ರಾಮ‌ ಪಂಚಾಯ್ತಿ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಸೇವೆಗಳ ವಿಕೇಂದ್ರೀಕರಣ ಮಾಡುವ ಮೂಲಕ ಜನರ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುವುದು. ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ಶಿಷ್ಯವೇತನ ಒದಗಿಸುವ ಮೂಲಕ ಅವರ ಬದುಕಿಗೆ ಸರ್ಕಾರ ಆಸರೆ‌ಯಾಗಲಿದೆ. ರೈತರ ಮಕ್ಕಳು ಬೇರೆ‌ ಬೇರೆ‌ ರೀತಿಯ ವೃತ್ತಿ ಶಿಕ್ಷಣ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ. ಅಮೃತ‌ ಯೋಜನೆಗಳ ಜಾರಿ ಮೂಲಕ ಹಳ್ಳಿಗಳ ಪ್ರಗತಿಗೆ ಕ್ರಮ ವಹಿಸಲಾಗಿದೆ ಎಂದರು.

ಏತ ನೀರಾವರಿ ಯೋಜನೆಗಳಿಗೆ ಶೀಘ್ರ ಚಾಲನೆ:ಶಂಕರಲಿಂಗ ಏತ ನೀರಾವರಿ ಹಾಗೂ ಅಡವಿ ಸಿದ್ಧೇಶ್ವರ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಆರಂಭಿಸಲಾಗುವುದು. ಅದೇ ರೀತಿ ಆರು ಬ್ಯಾರೇಜ್ ತುಂಬಿಸಲು ಆದಷ್ಟು ಬೇಗನೇ ಮಂಜೂರಾತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಕೇಶ್ವರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ:ಸಂಕೇಶ್ವರ ಪಟ್ಟಣಕ್ಕೆ‌ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಯೋಜನೆಗೆ ವರ್ಷಾಂತ್ಯದಲ್ಲಿ ಅನುಮತಿ ನೀಡಲಾಗುವುದು ತಿಳಿಸಿದರು.

ಅಧಿಕಾರ ಶಾಶ್ವತವಲ್ಲ ಎನ್ನುವುದನ್ನು ಪ್ರತಿ ದಿನ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಪ್ರೀತಿ-ವಿಶ್ವಾಸ ಇರುವವರೆಗೆ ನಾವು ಅಧಿಕಾರದಲ್ಲಿರುತ್ತೇವೆ ಎಂದರು.

ವಸತಿ ಕಲ್ಪಿಸಲು 50 ಎಕರೆ ಜಮೀನು ಹಸ್ತಾಂತರ:ಸಂಕೇಶ್ವರ ಹೋಬಳಿಯ ಹರಗಾಪುರ ಗ್ರಾಮದ 50 ಎಕರೆ‌ ಸರ್ಕಾರಿ ಜಮೀನನ್ನು ವಸತಿರಹಿತರಿಗೆ ವಸತಿ ಕಲ್ಪಿಸಲು ಸಂಕೇಶ್ವರ ಪುರಸಭೆಗೆ ಹಸ್ತಾಂತರಿಸಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ಸರ್ಕಾರವು ಜನರ ಮನೆಬಾಗಿಲಿಗೆ ಎಂಬ ಯೋಜನೆಯನ್ನು ಮುಖ್ಯಮಂತ್ರಿ ಜಾರಿಗೆ ತಂದಿದ್ದಾರೆ. ಇದೇ ರೀತಿ ವಿನೂತನ ಯೋಜನೆಗಳನ್ನು ರೂಪಿಸಲಿದ್ದಾರೆ ಎಂದರು.

ಸಂಕೇಶ್ವರ ಪಟ್ಟಣದಲ್ಲಿ ₹ 110 ಕೋಟಿ ವೆಚ್ಚದಲ್ಲಿ ಸಂಪೂರ್ಣ ಒಳಚರಂಡಿ ವ್ಯವಸ್ಥೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇಡೀ ರಾಜ್ಯದಲ್ಲಿ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಕೃಷ್ಣಾ ಯೋಜನೆಗೆ ಆದ್ಯತೆ ನೀಡಬೇಕು, ಎಂದು ಮನವಿ ಮಾಡಿದರು.

ಹಿರಣ್ಯಕೇಶಿ‌ ನದಿಯ ಮೂಲಕ ಆರು ಬ್ಯಾರೇಜ್ ಗಳಲ್ಲಿ ನೀರು ಸಂಗ್ರಹಿಸಲು, ಹುಕ್ಕೇರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಉಳಿದಿರುವ ಇನ್ನೂ ಹದಿನೇಳು ಕೆರೆಗಳನ್ನು ತುಂಬಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಅರಣ್ಯ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ ಉಪಸ್ಥಿತರಿದ್ದರು.

ಸಂಕೇಶ್ವರ ಪುರಸಭೆಗೆ ₹ 20 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ ಮನವಿಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿದರು.

ಹುಕ್ಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ: ಬೆಳಗಾವಿಜಿಲ್ಲೆಯ ಹುಕ್ಕೇರಿಯಲ್ಲಿ ₹ 40.40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು.

ಹುಕ್ಕೇರಿಯ ವಸತಿರಹಿತ ರೈತರಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಮಂಜೂರಾದ 20 ಎಕರೆ ಗೋಮಾಳ ಜಮೀನನ್ನು ಪುರಸಭೆಗೆ ಹಸ್ತಾಂತರಿಸಿದರು.

ಹುಕ್ಕೇರಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಡಿಪ್ಲೊಮಾ ಕಾಲೇಜು, ಬಾಲಕರು ಹಾಗೂ ಬಾಲಕಿಯರ ವಸತಿನಿಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಹುಕ್ಕೇರಿ ಅಭಿವೃದ್ಧಿ ಹಿಂದೆ ಉಮೇಶ್ ಕತ್ತಿ ಶ್ರಮ: ಸಿಎಂ ಶ್ಲಾಘನೆ

ಹುಕ್ಕೇರಿ ತಾಲ್ಲೂಕಿನಲ್ಲಿ ಅಭಿವೃದ್ಧಿಯ ಪರ್ವ ಆಗುತ್ತಿದೆ. ಜನಪರ ನಾಯಕ ಪ್ರತಿನಿಧಿಸುವ ಕ್ಷೇತ್ರ ಹೇಗೆ ಅಭಿವೃದ್ಧಿ ಆಗಬಹುದು ಎನ್ನುವುದಕ್ಕೆ ಹುಕ್ಕೇರಿ ಮಾದರಿಯಾಗಿದೆ. ಇದರ‌ ಹಿಂದೆ ಉಮೇಶ ಕತ್ತಿ ಅವರ ಶ್ರಮವಿದೆ. ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದವಿದೆ ಎಂದು ಬೊಮ್ಮಾಯಿ ಹೇಳಿದರು.

ಉಮೇಶ ಕತ್ತಿ ಸಚಿವರಾಗುವುದು ತಡವಾದರೂ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಕೆಲಸ ಮಾಡಿಸಿಕೊಳ್ಳುವುದು ತಪ್ಪಿಸಲಿಲ್ಲ. ಬಹಳ ಕೆಲಸವನ್ನು ಮಾಡಿಸಿಕೊಂಡರು. ತಡವಾಗಿ ಮಂತ್ರಿಯಾದರೂ ಜನರಿಗೆ ಹೇಗೆ ಲಾಭ ಆಗುತ್ತದೆ ಎನ್ನುವುದು ಇಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿದಾಗ ತಿಳಿಯಿತು ಎಂದು ಅವರು ಹೇಳಿದರು.

ಜನಪ್ರಿಯ ನಾಯಕರಿಗಿಂತಲೂ ಜನೋಪಯೋಗಿ ನಾಯಕರು ಇಂದಿನ ಅಗತ್ಯವಾಗಿದೆ.ಪ್ರಗತಿ ವರದಿ ಸಿದ್ಧವಾದರೆ ಉಮೇಶ ಕತ್ತಿ ಅವರು ಮೊದಲ ರ‌್ಯಾಂಕ್ ಗಳಿಸುತ್ತಾರೆ ಎಂದು ಬೊಮ್ಮಾಯಿಮೆಚ್ಚುಗೆ ಸೂಚಿಸಿದರು.

ಉಮೇಶ ಕತ್ತಿ ನಾಡಿನ ಬಗ್ಗೆ ಬಹಳ ಚಿಂತನೆ ಮಾಡುತ್ತಾರೆ. ಹೀಗಾಗಿಯೇ ಅವರು ಉತ್ತರ ಕರ್ನಾಟಕದ ಬಗ್ಗೆ ಆಗಾಗ ಕೂಗು ಹಾಕುತ್ತಿರುತ್ತಾರೆ ಎಂದು ಹೇಳಿದಾಗ ನೆರೆದಿದ್ದವರಿಂದ ಚಪ್ಪಾಳೆಗಳ‌ ಸುರಿಮಳೆಯಾಯಿತು. ಉಮೇಶ ಕತ್ತಿ ಅವರು ಫಲ ಕೊಡುವ ಹೆಮ್ಮರವಾಗಿ ಬೆಳೆದಿದ್ದಾರೆ. ಉಮೇಶ ಕತ್ತಿ ಬಂದಾಗ ಬೇಸರ ಆಗುವುದಿಲ್ಲ. ಆದರೆ, ಅವರ ಸಹೋದರ ರಮೇಶ ಕತ್ತಿ ಏನಾದರೂ ಕೆಲಸ ತೆಗೆದುಕೊಂಡೇ ಬರುತ್ತಾರೆ. ಜನಪರವಾಗಿ ಯೋಚಿಸುವ ನಾಯಕರಿವರು ಎಂದು ಕತ್ತಿ ಸಹೋದರರನ್ನು ಹೊಗಳಿದರು.

ಕೊಯ್ಲು ಅಥವಾ ಸುಗ್ಗಿ ಮುಗಿದ ನಂತರವೇ ಕೃಷಿಕರಿಗೆ ಹೆಚ್ಚಿನ ಕೆಲಸ ಇರುತ್ತದೆ. ಅದನ್ನು ರೈತರು ಅರಿಯಬೇಕು. ಮಾರುಕಟ್ಟೆ ಬಗ್ಗೆಯೂ ತಿಳಿವಳಿಕೆ ಹೊಂದಬೇಕು. ಆಗ ರೈತರ ಬೆವರಿಗೆ ಬೆಲೆ ಸಿಗುತ್ತದೆ ಎಂದು ಸಲಹೆ ನೀಡಿದರು. ಈವರೆಗೆ ಕೃಷಿ ಅಭಿವೃದ್ಧಿ ಆಗಿದೆ. ಆದರೆ, ಕೃಷಿಕರು ಅಭಿವೃದ್ಧಿ ಆಗಬೇಕಾಗಿದೆ. ಇದಕ್ಕಾಗಿ ಹೆಚ್ಚಿನ ಅನುದಾನ ಒದಗಿಸುವ ಚಿಂತನೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ತಲಾ ಆದಾಯದಲ್ಲಿ 4ನೇ ಸ್ಥಾನದಲ್ಲಿದ್ದೇವೆ. ಆದಾಯ ಹೆಚ್ಚಿಸುವುದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸುತ್ತೇನೆ. ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT