ಶನಿವಾರ, ಸೆಪ್ಟೆಂಬರ್ 19, 2020
21 °C
ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ಹೇಳಿಕೆ

ಗ್ರಾಮೀಣರಿಗೆ ಸಹಕಾರ ಬ್ಯಾಂಕ್‌ಗಳಿಂದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮಧ್ಯೆ ತೀವ್ರ ಪೈಪೋಟಿ ಇದೆ. ಆದರೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವಲ್ಲಿ ಸಹಕಾರ ಬ್ಯಾಂಕ್‌ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದಿಂದ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಸಿಇಒಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದು ವಿರಳ. ಅಲ್ಲಿ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳು ಹೆಚ್ಚಾಗಿ ಸೇವೆ ನೀಡುತ್ತಿವೆ. ದಕ್ಷತೆಯಿಂದ ಕಾರ್ಯನಿರ್ವಹಿಸಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕಾನೂನುಗಳನ್ನು ತಿಳಿದುಕೊಳ್ಳಬೇಕು. ಅವುಗಳನ್ನು ಅಳವಡಿಸಿಕೊಳ್ಳಬೇಕು. ಹೀಗಾಗಿ, ಆಗಾಗ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣಕುಮಾರ ಮಾತನಾಡಿ, ‘ಆದಾಯ ತೆರಿಗೆಯು ಸಹಕಾರ ಬ್ಯಾಂಕ್ ಹಾಗೂ ಸಂಘಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಈ ಕುರಿತು ಪ್ರತ್ಯೇಕ ಕಾನೂನು ಜಾರಿಗೆ ತಂದರೆ ಅನುಕೂಲವಾಗುತ್ತದೆ. ಆಧುನಿಕ ತಂತ್ರಜ್ಞಾನವಾದ ಮೊಬೈಲ್ ಬ್ಯಾಂಕಿಂಗ್ ಅನ್ನು ಜನರು ಬಳಸುತ್ತಿದ್ದು, ಬ್ಯಾಂಕ್‌ಗಳು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಇಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ಅಧ್ಯಕ್ಷ ಡಿ.ಟಿ. ಪಾಟೀಲ, ‘ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಆಡಳಿತ ಮಂಡಳಿಯವರು ಹಾಗೂ ಸಿಇಒಗಳು ಸಾಮರಸ್ಯದಿಂದ ಇರಬೇಕಾಗುತ್ತದೆ’ ಎಂದರು.

ಆರ್‌ಬಿಐ ನಿವೃತ್ತ ಅಧಿಕಾರಿ ಕೆ.ಎಸ್. ಮಹದೇವಸ್ವಾಮಿ, ಎಚ್‌.ಎಸ್. ನಾಗರಾಜಯ್ಯ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಬಿ.ಡಿ. ಪಾಟೀಲ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಆರ್.ಕೆ. ಪಾಟೀಲ, ಶಿವನಗೌಡ ಎಸ್. ಬಿರಾದರ, ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ನಿರ್ದೇಶಕ ಎಸ್.ಎಫ್. ದೊಡಗೌಡರ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್. ಉಳ್ಳಾಗಡ್ಡಿ, ನಿರ್ದೇಶಕ ಕೆ.ಎಂ. ಬಡಗಾಂವಿ, ಸಹಕಾರ ಸಂಘಗಳ ಉಪನಿಬಂಧಕ ಕೆ.ಎಲ್. ಶ್ರೀನಿವಾಸ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಬಿ. ಸುರೇಶರಾವ್ ಇದ್ದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಎಸ್. ಸುಲ್ತಾನಪುರಿ ಮಾತನಾಡಿದರು. ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಎಸ್.ವಿ. ಹಿರೇಮಠ ನಿರೂಪಿಸಿದರು. ಸಹಕಾರ ಮಹಾಮಂಡಳದ ಸಹಾಯಕ ಯೋಜನಾಧಿಕಾರಿ ಎಚ್.ಡಿ. ಮಂಜುನಾಥ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು