ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮೇಯರ್‌ ಗಾದಿಗಾಗಿ ಪೈಪೋಟಿ

ಚರ್ಚೆಯಲ್ಲಿ ಹಲವರ ಹೆಸರು; ಉಪ ಮೇಯರ್‌ ಸ್ಥಾನ ಮಹಿಳೆಗೆ
Last Updated 7 ಸೆಪ್ಟೆಂಬರ್ 2021, 14:53 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಮೇಯರ್‌ ಮತ್ತು ಉಪ ಮೇಯರ್‌ ಯಾರಾಗಬಹುದು ಎಂಬ ಚರ್ಚೆ ಆರಂಭವಾಗಿದೆ. ಆ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈ‍ಪೋಟಿ ಕಂಡುಬಂದಿದೆ.

ಮೇಯರ್‌ ಸ್ಥಾನವು ಸಾಮಾನ್ಯ ಮತ್ತು ಉಪಮೇಯರ್‌ ಸ್ಥಾನವು ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ. 58 ಸದಸ್ಯ ಬಲದ ಈ ಸ್ಥಳೀಯ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆಯ ಮೇಲೆ ಸ್ಪರ್ಧಿಸಿದ್ದವು. 35 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯು, ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ತಯಾರಿ ನಡೆಸಿದೆ. ಆಕಾಂಕ್ಷಿಗಳು ತಮ್ಮ ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದು, ಪಕ್ಷದ ಮುಖಂಡರ ಮನವೊಲಿಕೆಗೆ ಮುಂದಾಗಿದ್ದಾರೆ.

ಮೇಯರ್‌ಗೆ:ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರದಿಂದ ಬಿಜೆಪಿಯ ಜಯತೀರ್ಥ ಸವದತ್ತಿ (ವಾರ್ಡ್‌ ನಂ.4), ರಾಜು ಭಾತಖಾಂಡೆ (ವಾರ್ಡ್‌ ನಂ.16), ರವಿರಾಜ ಸಾಂಬ್ರೇಕರ (ವಾರ್ಡ್‌ ನಂ.22), ಜಯಂತ ಜಾಧವ (ವಾರ್ಡ್‌ ನಂ.23), ನಿತಿನ್ ಜಾಧವ (ವಾರ್ಡ್‌ ನಂ.29), ಶ್ರೇಯಸ್ ನಾಕಾಡಿ (ವಾರ್ಡ್‌ ನಂ.34), ರಾಜಶೇಖರ ಡೋಣಿ (ವಾರ್ಡ್‌ ನಂ.36), ಉದಯಕುಮಾರ ವಿಠ್ಠಲ ಉಪರಿ (ವಾರ್ಡ್‌ ನಂ.39), ಮಂಗೇಶ ಪವಾರ (ವಾರ್ಡ್‌ ನಂ.41), ಆನಂದ ಚವ್ಹಾಣ (ವಾರ್ಡ್‌ ನಂ.41), ಹನಮಂತ ಕೊಂಗಾಲಿ (ವಾರ್ಡ್‌ ನಂ.46) ಗೆದ್ದಿದ್ದಾರೆ. ಇವರೆಲ್ಲರೂ ಇದೇ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದವರು. ಇವರಲ್ಲಿ ಯಾರಾದರೊಬ್ಬರಿಗೆ ‘ನಗರದ ಪ್ರಥಮ ಪ್ರಜೆ’ಯಾಗುವ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇರುವುದರಿಂದಾಗಿ ಬೇರೆ ವರ್ಗದವರಿಗೆ ಕೊಡುವುದಕ್ಕೂ ಅವಕಾಶವಿದೆ. ಹೀಗೆ ನೋಡಿದಾಗ, ಅನುಭವಿಯನ್ನು ಪರಿಗಣಿಸಿದರೆ 3ನೇ ಬಾರಿಗೆ ಗೆದ್ದಿರುವ (2 ಬಾರಿ ಪಕ್ಷೇತರರಾಗಿ) ರವಿ ಧೋತ್ರೆ ಅವರಿಗೂ ಅವಕಾಶವಿದೆ. ಅವರು 28ನೇ ವಾರ್ಡ್‌ನಿಂದ ಪರಿಶಿಷ್ಟ ಜಾತಿಗೆ ಮೀಸಲಾದ ವಾರ್ಡ್‌ನಿಂದ ಗೆದ್ದಿದ್ದಾರೆ.

ಉಪ ಮೇಯರ್‌ಗೆ:ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾದ ಸ್ಥಾನದಿಂದ ರೇಷ್ಮಾ ಪಾಟೀಲ (ವಾರ್ಡ್‌ ನಂ.33), ಸಾಮಾನ್ಯ ಮಹಿಳೆ (ವಾರ್ಡ್‌ ನಂ.33), ದೀಪಾಲಿ ಟೊಪಗಿ (ವಾರ್ಡ್‌ ನಂ.49), ಮಾಧವಿ ರಾಘೋಚೆ (ವಾರ್ಡ್‌ ನಂ.44), ಸವಿತಾ ಮುರುಘೇಂದ್ರಗೌಡ ಪಾಟೀಲ (ವಾರ್ಡ್‌ ನಂ.56), ಶೋಭಾ ಸೋಮನ್ನಾಚೆ (ವಾರ್ಡ್ ನಂ.57) ಹಾಗೂ ಪ್ರಿಯಾ ಸಾತಗೌಡ (ವಾರ್ಡ್‌ ನಂ.58) ವಿಜೇತರಾಗಿದ್ದಾರೆ. ಇವರು ಕೂಡ ಪ್ರಥಮ ಬಾರಿಗೆ ಗೆದ್ದವರೇ ಆಗಿದ್ದಾರೆ.

ಸದ್ಯದ ಮೀಸಲಾತಿ ಪ್ರಕಾರವೇ ಪಕ್ಷದ ವರಿಷ್ಠರು ಆಯ್ಕೆ ನಡೆಸಿದಲ್ಲಿ, ಹೊಸ ಮುಖಗಳಿಗೆ ಮತ್ತು ಮೊದಲ ಪ್ರಯತ್ನದಲ್ಲಿ ಗೆದ್ದವರಿಗೇ ಮೇಯರ್‌ ಮತ್ತು ಉಪ ಮೇಯರ್‌ ಆಗುವ ಅವಕಾಶ ಜಾಸ್ತಿ ಇದೆ.

ಈ ಚುನಾವಣೆಯ ಉಸ್ತುವಾರಿಗಳಲ್ಲಿ ಒಬ್ಬರಾಗಿದ್ದ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಇದೇ ವಿಷಯವಾಗಿ ಚರ್ಚಿಸುವುದಕ್ಕಾಗಿ ಅವರು ಬೆಂಗಳೂರಿಗೆ ತೆರಳಿದ್ದು, ವರಿಷ್ಠರಿಗೆ ವರದಿ ನೀಡಲಿದ್ದಾರೆ ಎಂದು ತಿಳಿದುಂದಿದೆ.

‘ಪಕ್ಷದಲ್ಲಿ ಒಮ್ಮೊಮ್ಮೆ ಅಚ್ಚರಿಯ ಆಯ್ಕೆಗಳು ಕೂಡ ನಡೆಯುತ್ತವೆ. ಇಲ್ಲಿನ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯಲ್ಲೂ ಆ ಪ್ರಯೋಗ ನಡೆದರೆ ಅಚ್ಚರಿ ಇಲ್ಲ’ ಎಂಬ ಮಾತು ಬಿಜೆಪಿಯ ಮುಖಂಡರ ವಲಯದಲ್ಲಿ ಕೇಳಿಬರುತ್ತಿದೆ.

ಮೇಯರ್‌–ಉಪ ಮೇಯರ್‌ ಚುನಾವಣೆಗೆ ನಗರಾಭಿವೃದ್ಧಿ ಇಲಾಖೆಯು ಇನ್ನೂ ದಿನಾಂಕ ನಿಗದಿಪಡಿಸಿಲ್ಲ.

ನಾನು ಮೇಯರ್ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾವೆಲ್ಲರೂ ಬದ್ಧವಾಗಿರುತ್ತೇವೆ. ಪಕ್ಷದಲ್ಲಿನ ಶಿಸ್ತನ್ನು ಪಾಲಿಸುತ್ತೇವೆ.

– ಹನಮಂತ ಕೊಂಗಾಲಿ, ಸದಸ್ಯ, ವಾರ್ಡ್‌ ನಂ.46

ಅಭಿವೃದ್ಧಿ ವಿಷಯದಲ್ಲಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ, ಮೇಯರ್‌–ಉಪ ಮೇಯರ್‌ ಆಯ್ಕೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ಅವರ ನಿರ್ದೇಶನದಂತೆ ಮುಂದುವರಿಯುತ್ತೇವೆ.

– ಅಭಯ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT