ಬೆಳಗಾವಿ: ಕನ್ನಡ ವೈದ್ಯ ಬರಹಗಾರರ 5ನೇ ರಾಜ್ಯ ಸಮ್ಮೇಳನವು ಬೆಳಗಾವಿಯ ಕೆಎಲ್ಇ ಶತಮಾನೋತ್ಸವ ಭವನದ ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಆಗಸ್ಟ್ 24 ಮತ್ತು 25ರಂದು ನಡೆಯಲಿದೆ. ವೈದ್ಯ ಸಾಹಿತಿ ಡಾ. ನಾ.ಸೋಮೇಶ್ವರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆಎಲ್‌ಇ ವಿಶ್ವವಿದ್ಯಾಲಯದ ಕನ್ನಡ ಬಳಗ, ಭಾರತೀಯ ವೈದ್ಯಕೀಯ ಸಂಘ ಹಾಗೂ ಕನ್ನಡ ವೈದ್ಯ ಬರಹಗಾರರ ಸಮಿತಿ ಸಹಯೋಗದಲ್ಲಿ ನಡೆಯುವ ಈ ಸಮ್ಮೇಳನವನ್ನು ಸಾಹಿತಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು. ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆ ಅಧ್ಯಕ್ಷ ಡಾ.ಶ್ರೀನಿವಾಸ, ನಿಯೋಜಿತ ರಾಜ್ಯ ಘಟಕದ ಅಧ್ಯಕ್ಷ ಡಾ.ವಿ.ವಿ.ಚಿನಿವಾಲರ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ನಿತಿನ್ ಗಂಗನೆ ಮತ್ತು ಪ್ರಮುಖರು ಪಾಲ್ಗೊಳ್ಳುವರು.
‘ಕನ್ನಡ ವೈದ್ಯ ಸಾಹಿತ್ಯದ ಕುರಿತು 8 ಗೋಷ್ಠಿಗಳು, ಕಾವ್ಯ ಮತ್ತು ಕಥಾ ಕಾರ್ಯಾಗಾರ, ವೈದ್ಯ ಕವಿಗೋಷ್ಠಿ, ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ’ ಎಂದು ಸಮ್ಮೇಳನದ ಕಾರ್ಯದರ್ಶಿ ಡಾ.ಅವಿನಾಶ ಕವಿ ತಿಳಿಸಿದರು.