ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿಯಿಂದ ಎಲ್ಲರಿಗೂ ಗೊಂದಲ: ಸತೀಶ ಜಾರಕಿಹೊಳಿ

Last Updated 25 ನವೆಂಬರ್ 2021, 15:06 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯು 3ನೇ ವ್ಯಕ್ತಿಯ ಸ್ಪರ್ಧೆಯಿಂದಾಗಿ ರಂಗೇರಿದೆ. ಪಕ್ಷೇತರ ಅಭ್ಯರ್ಥಿ (ಲಖನ್‌ ಜಾರಕಿಹೊಳಿ) ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರೆಲ್ಲರನ್ನೂ ಸಂಪೂರ್ಣ ಗೊಂದಲಕ್ಕೀಡು ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ರಾಯಬಾಗದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಒಂದೆಡೆ ಪಕ್ಷದ ಮುಖಂಡ ಶಾಮ ಘಾಟಗೆ, ಮತ್ತೊಮ್ಮೆ ರಾಜು ಕಾಗೆ, ಇನ್ನೊಂದಡೆ ಬಿಜೆಪಿ ಶಾಸಕ ಪಿ. ರಾಜೀವ ಅವರನ್ನು ಭೇಟಿಯಾಗುತ್ತಾರೆ. ಎಲ್ಲರೊಂದಿಗೂ ಫೋಟೊ ಹಂಚಿಕೊಳ್ಳುತ್ತಾರೆ. ಇದರಿಂದ ಎಲ್ಲರಿಗೂ ಗೊಂದಲ ಸಹಜ. ಪಕ್ಷದ ಮತದಾರರು ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಬೆಂಬಲಿಸಿ ನಮಗೆ ಶಕ್ತಿ ತುಂಬಬೇಕು’ ಎಂದು ಕೋರಿದರು.

‘ಗರ್ದಿ ಗಮ್ಮತ್ತಿನಲ್ಲಿ ನಾವ್ಯಾರೂ ಸೋಲಬಾರದು. ಅವರು ತಾಜ್‌ಮಹಲ್, ಕುತುಬ್ ಮಿನಾರ್, ನಿಜಾಮ್ ಕೋಟೆ, ಮೈಸೂರು ಅರಮನೆ ಮೊದಲಾದ ಯಾವುದೇ ಚಿತ್ರ ತೋರಿಸಲಿ; ನೀವು ಬದಲಾಗಬಾರದು. ಆ ವ್ಯಕ್ತಿ ಶಾಮ ಘಾಟಗೆ ಸೇರಿ ನಮ್ಮ ಮುಖಂಡರ ಮನೆಗೆ ಎಷ್ಟು ಬಾರಿ ಬರುತ್ತಾರೋ ಗೊತ್ತಿಲ್ಲ’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೆಸರು ಹೇಳದೆ ಟೀಕಿಸಿದರು. ‘ಯಾರಾದರೂ ಮನೆಗೆ ಬಂದರೆ ಬರಬೇಡಿ ಎನ್ನಲಾದೀತೇ?’ ಎಂದೂ ಕೇಳಿದರು.

‘ನಿಯಮಿತವಾಗಿ ಬರುವ ಬಸ್ ಬೇರೆ, ಜಾತ್ರೆಯ ಬಸ್ ಬೇರೆ ಎನ್ನುವುದನ್ನು ಮರೆಯಬಾರದು. ಅವರೀಗ ಹವಾನಿಯಂತ್ರಿತ ಬಸ್ ತಂದಿದ್ದಾರೆ. ಝಗಮಗ ವಿದ್ಯುದ್ದೀಪಾಲಂಕಾರವಿದೆ. ಗೋಕಾಕ ಕರದಂಟಿದೆ. ಕುಡಿಯುವ ನೀರಿನ ಬಾಟಲಿ ಇದೆ. ಹತ್ತಿ ಹತ್ತಿ ಎನ್ನುತ್ತಾರೆ. ಇದಕ್ಕೆಲ್ಲಾ ಮರುಳಾಗಬಾರದು’ ಎಂದರು.

‘ಬಿಜೆಪಿಯದ್ದು ದಪ್ಪ ಚರ್ಮದ ಸರ್ಕಾರ. ಅದಕ್ಕೆ ಕಡಿವಾಣ ಹಾಕಬೇಕಾದರೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಕೋವಿಡ್ ಸಂಕಷ್ಟ ಹಾಗೂ ಪ್ರವಾಹದ ಸಂದರ್ಭದಲ್ಲಿ ನೆರವಾಗಲು ಬಾರದವರು ಈಗ ಮತ ಕೇಳಲು ಬರುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಮಹಿಳೆಯನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಒಬ್ಬರು ಥೂ ಥೂ... ಎಂದು ಹೇಳಿ ಹೇಗೆ ಗೌರವ ಕೊಟ್ಟಿದ್ದಾರೆ ಎನ್ನುವುದನ್ನು ನೀವೇ ನೋಡಿದ್ದೀರಿ’ ಎಂದು ಗೋಕಾಕ ಶಾಸಕ ರಮೇಶ ಜಾಕಿಹೊಳಿ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT