ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಕ್ಷೇತ್ರ ನಿರ್ಲಕ್ಷ್ಯ: ಶಾಸಕ ಆರ್.ವಿ. ದೇಶಪಾಂಡೆ ಆರೋಪ

Published 4 ಏಪ್ರಿಲ್ 2024, 15:14 IST
Last Updated 4 ಏಪ್ರಿಲ್ 2024, 15:14 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭೆ ಕ್ಷೇತ್ರಗಳನ್ನು ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಸಂಸದ ಕಡೆಗಣಿಸುತ್ತ ಬಂದರು’ ಎಂದು ಶಾಸಕ ಆರ್.ವಿ. ದೇಶಪಾಂಡೆ ಆರೋಪಿಸಿದರು.

ಇಲ್ಲಿಯ ಕಾಂಗ್ರೆಸ್ ಮುಖಂಡ ಮಹೇಶ ಶೆಟ್ಟರ್ ಮನೆಯಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ವಿರೋಧ ಪಕ್ಷಗಳಿಗೆ ಸಂದೇಹವಿತ್ತು. ಗ್ಯಾರಂಟಿಗಳ ಕುರಿತು ಅವರು ಚೇಷ್ಟೆಯನ್ನೂ ಮಾಡಿದರು. ಆದರೆ, ಸರ್ಕಾರ ರಚನೆಯಾದ ನಂತರ ಐದೂ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಇವೇ ಬಂಡವಾಳ ಆಗಿವೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಹೇಳಿದ ಮಾತಿನಂತೆ ನಡೆದುಕೊಳ್ಳಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು. ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ’ ಎಂದು ವಾಗ್ದಾಳಿ ನಡೆಸಿದರು.

‘ಕರ್ನಾಟಕದಲ್ಲಿ ಭೀಕರ ಬರಗಾಲವಿದೆ. ನಯಾಪೈಸೆ ಬರ ಪರಿಹಾರ ಬಿಡುಗಡೆ ಆಗಿಲ್ಲ. ರಾಜ್ಯವನ್ನು ಕೇಂದ್ರ ಮಲತಾಯಿ ಧೋರಣೆಯಿಂದ ನೋಡುತ್ತಿದೆ’ ಎಂದು ದೂರಿದರು.

‘ಸರ್ವಾನುಮತದಿಂದ ಆಯ್ಕೆಯಾಗಿರುವ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳಕರ ಅವರು ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಈ ಬಾರಿ 60 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಹಿಂದಿನ ಸರ್ಕಾರ ಜಾರಿಗೆ ತಂದಿರುವ ಕಾಮಗಾರಿ ಪೂಜೆ ನೆರವೇರಿಸುತ್ತ ಹೋಗಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿ, ‘ನಾನು ತಂದ ಅಭಿವೃದ್ಧಿ ಕೆಲಸಗಳ ಪೂಜೆಯನ್ನು ನಾನು ಮಾಡುವುದಿಲ್ಲ. ಇನ್ನು ಅವರದ್ದು ನಾನೆಲ್ಲಿ ಮಾಡಲಿ’ ಎಂದು ಪ್ರಶ್ನಿಸಿದರು.

ಲಂಡನ್ನಿಗೆ ಹೋಗುತ್ತದೆಯೇ?: ಲೋಕಸಭೆ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುತ್ತದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ ಅವರು, ‘ಸರ್ಕಾರ ಎಲ್ಲಿ ಹೋಗುತ್ತದೆ, ಲಂಡನ್ನಿಗೋ ಅಥವಾ ಅಮೇರಿಕಕ್ಕೊ ಎಲ್ಲಿ ಹೋಗುತ್ತದೆ. ಅದು ಅವರ ಕನಸು’ ಎಂದು ತಿರುಗೇಟು ನೀಡಿದರು.

ಮುಖಂಡ ಶಂಕರಗೌಡ ಪಾಟೀಲ, ಶಂಕರ ಹೊಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT