ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ಚಾಲನೆ

ವಕೀಲರಿಗೆ ಸಚಿವ ಉಮೇಶ ಕತ್ತಿ ಭರವಸೆ
Last Updated 6 ಫೆಬ್ರುವರಿ 2021, 11:55 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿಗೆ ಮಂಜೂರಾಗಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಪೀಠವನ್ನು ತಕ್ಷಣ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಪಂಚಾಯ್ತಿಯ ಹಳೆಯ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಭರವಸೆ ನೀಡಿದರು.

ನಗರದ ವಕೀಲರ ಸಂಘದಲ್ಲಿ ಶನಿವಾರ ಮನವಿ ಹಾಗೂ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಜಿಲ್ಲಾ ನ್ಯಾಯಾಲಯದ ಆವರಣದಲ್ಲೆ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ ಸಲ್ಲಿಸಬೇಕು. ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಯನ್ನು ಕೋರುತ್ತೇನೆ. ಗ್ರಾಹಕರ ವ್ಯಾಜ್ಯಗಳ ತ್ವರಿತ ವಿಲೇವಾರಿಗಾಗಿ ಕ್ರಮ ವಹಿಸುವಂತೆ ಸಂಬಂಧಿಸಿದವರಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

‘ನಗರದಲ್ಲಿ ಮಿನಿ ವಿಧಾನಸೌಧದೊಂದಿಗೆ ನ್ಯಾಯಾಲಯ ಸಂಕೀರ್ಣವನ್ನೂ ನಿರ್ಮಿಸಲಾಗುವುದು. ಬೆಳಗಾವಿ ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ. ಆ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸುವಂತೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದರು.

ವಕೀಲ ಎಂ.ಬಿ. ಝಿರಲಿ ಮಾತನಾಡಿ, ‘ಹುಕ್ಕೇರಿಯಂತೆ ಬೆಳಗಾವಿ ನ್ಯಾಯಾಲಯದಲ್ಲೂ ಇ–ಗ್ರಂಥಾಲಯ ಸ್ಥಾಪನೆಗೆ ಸಚಿವರು ಸಹಕಾರ ನೀಡಬೇಕು’ ಎಂದು ಕೋರಿದರು.

‘ಇಲ್ಲಿ ಎರಡು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ ಇವೆ. 4,771 ಪ್ರಕರಣಗಳು ಬಾಕಿ ಇವೆ. ಇದಕ್ಕೆ, ಮೂಲಸೌಲಭ್ಯ ಕೊರತೆ ಹಾಗೂ ಹುದ್ದೆಗಳು ಖಾಲಿ ಇರುವುದು ಕಾರಣವಾಗಿದೆ. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠವನ್ನು ತಕ್ಷಣ ಆರಂಭಿಸಬೇಕು. ಈ ಮೂಲಕ ಉತ್ತರ ಕರ್ನಾಟಕದ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ವಕೀಲ ಎನ್.ಆರ್. ಲಾತೂರ್‌ ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷರಾದ ಸಿ.ಟಿ. ಮಜ್ಜಗಿ, ಗಜಾನನ ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್.ಸಿ. ಪಾಟೀಲ, ಯಶವಂತ ಲಮಾಣಿ, ರೋಹಿತ ಲಾತೂರ್ ಇದ್ದರು.

ಇದಕ್ಕೂ ಮುನ್ನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.

***

‘ವಕೀಲರ ಹೋರಾಟ ನೋಡಿದರೆ ಅಂಜಿಕೆ ಬರುತ್ತದೆ’

ದಕ್ಷಿಣ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ‘ನಗರದ ಕೋರ್ಟ್ ಆವರಣದಲ್ಲೇ ರಾಜ್ಯ ಗ್ರಾಹಕ ವ್ಯಾಜ್ಯಗಳ ಆಯೋಗದ ಕಟ್ಟಡ ನಿರ್ಮಾಣವಾಗಬೇಕು. ವಕೀಲರ ಹೋರಾಟ ನೋಡಿದರೆ ಅಂಜಿಕೆ ಬರುತ್ತದೆ. ಮತ್ತೆ ಅಂತಹ ಹೋರಾಟ ನಡೆಯದಿರಲೆಂದು ಸಚಿವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ‌. ವಕೀಲರೊಂದಿಗೆ ನಾನೂ ಬಂದು ಕೂರಬೇಕಾಗುತ್ತದೆ. ಏಕೆಂದರೆ, ಸಂಘದಲ್ಲಿ ನಾನು ಆಜೀವ ಸದಸ್ಯನಾಗಿದ್ದೇನೆ. ಸಚಿವರು ಅದಕ್ಕೆ ಅವಕಾಶ ಕೊಡಬಾರದು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT