ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಲ್ಲಿ 14ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

ಮತ್ತೆ ನಾಲ್ವರಿಗೆ ಕೋವಿಡ್-19: ಹೆಚ್ಚಿದ ಆತಂಕ
Last Updated 12 ಏಪ್ರಿಲ್ 2020, 12:38 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹೊಸದಾಗಿ ಮತ್ತೆ ನಾಲ್ವರಿಗೆ ‘ಕೋವಿಡ್-19’ ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 14ಕ್ಕೆ ಏರಿದ್ದು, ಆತಂಕವೂ ಹೆಚ್ಚಾಗಿದೆ.

ಈಗಾಗಲೇ ಒಂದು ಪ್ರಕರಣ ವರದಿಯಾಗಿರುವ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಆ ರೋಗಿಯು ರೋಗಿ ನಂ.128 ಜೊತೆ ಸಂಪರ್ಕ‌ ಹೊಂದಿದ್ದವರು. ಉಳಿದವರು ರಾಯಬಾಗದವರು. ಅವರು ಕೂಡ ರೋಗಿ ಸಂಖ್ಯೆ 150 ಜೊತೆ ಸಂಪರ್ಕಕ್ಕೆ ಬಂದಿದ್ದವರೇ ಆಗಿದ್ದಾರೆ. ಈ ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರು 19, 38, 55 ಹಾಗೂ 25 ವರ್ಷ ವಯಸ್ಸಿನವರಾಗಿದ್ದಾರೆ. ಇವರೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಪ್ರದೇಶಗಳನ್ನು ಈಗಾಗಲೇ ನಿರ್ಬಂಧಿತ (ಕಂಟೈನ್ಮೆಂಟ್‌ ಝೋನ್‌) ಎಂದು ಘೋಷಿಸಲಾಗಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ. ಹೊಸದಾಗಿ ಸೋಂಕು ದೃಢಪಟ್ಟಿರುವವರು ನಿಜಾಮುದ್ದೀನ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಸಂ‍ಪರ್ಕಕ್ಕೆ ಬಂದಿದ್ದವರೇ ಆಗಿದ್ದಾರೆ. ರಾಯಬಾಗದ ಮೂವರು ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಟ್ರಾವೆಲ್‌ ಹಿಸ್ಟರಿಯನ್ನು ಜಿಲ್ಲಾಡಳಿತ ಅಧಿಕೃತವಾಗಿ ನೀಡಿಲ್ಲ.

ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಬಿಗಿಗೊಳಿಸಲಾಗಿದೆ. ಬಹುತೇಕ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ತೀರಾ ಅವಶ್ಯವಿದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪೊಲೀಸರು ಮಾಡಿಕೊಂಡಿರುವ ಪೂರ್ವಸಿದ್ಧತೆ ಗಮನಿಸಿದರೆ, ಏ. 14ರ ನಂತರ ಲಾಕ್‌ಡೌನ್‌ ಮುಂದುವರಿಯುವುದೋ ಅಥವಾ ಸೀಲ್‌ಡೌನ್‌ ಜಾರಿಯಾಗುವುದೋ ಎನ್ನುವ ಗೊಂದಲ ಜನರಲ್ಲಿ ಮೂಡುತ್ತಿದೆ.

ಸಚಿವರ ನಗರ ಪ್ರದಕ್ಷಿಣೆ:ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಭಾನುವಾರ ಎಪಿಎಂಸಿ ಯಾರ್ಡ್, ಆಟೊನಗರದ ಆರ್‌ಟಿಒ ಗ್ರೌಂಡ್ ಹಾಗೂ ರವಿವಾರಪೇಟೆಯ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಿದರು. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ತರಕಾರಿ ವಾಹನಗಳಿಗೆ ಅಡ್ಡಿ ಮಾಡಬಾರದು ಎಂದು ಪೊಲೀಸರಿಗೆ ತಾಕೀತು ಮಾಡಿದರು.

ಬಳಿಕ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು. ರವಿವಾರಪೇಟೆಯಲ್ಲಿ ಒಂದೇ ಸಮಯದಲ್ಲಿ ಲೋಡ್ ಹಾಗೂ ಆನ್‌ಲೋಡ್ ಮಾಡುವುದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಪ್ರತ್ಯೇಕ ಸಮಯ ನಿಗದಿಪಡಿಸಿಕೊಳ್ಳಬೇಕು, ಜೊತೆಗೆ ಸಾರ್ವಜನಿಕರ ಮನೆಗಳಿಗೆ ದಿನಸಿ ತಲುಪಿಸುವ ಕಾರ್ಯ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಬಿ.ಎಸ್. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಹಾಗೂ ವ್ಯಾಪಾರಿಗಳು ಪಾಲ್ಗೊಂಡಿದ್ದರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಂಬಲಿಗರೊಂದಿಗೆ, ವಿವಿಧ ಬಡಾವಣೆಗಳಲ್ಲಿ ಸೋಂಕು ನಿವಾರಕ ಸಿಂಪಡಿಸಿ ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT