ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ: ಯಲ್ಲಮ್ಮ ದೇವಸ್ಥಾನ ಆರಂಭಕ್ಕೆ ಒತ್ತಾಯ

ಕೋವಿಡ್ ಪ್ರಕರಣ ಕಡಿಮೆಯಾಗಿದ್ದು ಪರಿಗಣಿಸುವಂತೆ
Last Updated 17 ಸೆಪ್ಟೆಂಬರ್ 2021, 13:55 IST
ಅಕ್ಷರ ಗಾತ್ರ

ಉಗರಗೋಳ (ಸವದತ್ತಿ ತಾ.): ‘ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಇಳಿಮುಖವಾಗಿದೆ. ಬಹುತೇಕ ಚಟುವಟಿಕೆಗಳಿಗೆ ಅನುಮತಿ ಕೊಡಲಾಗಿದೆ. ಹೀಗಾಗಿ, ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಇಲ್ಲಿನ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ ಆರಂಭಿಸಬೇಕು’ ಎನ್ನುವ ಒತ್ತಾಯ ಭಕ್ತರಿಂದ ಬಲವಾಗಿ ಕೇಳಿಬರುತ್ತಿದೆ.

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನವೂ ಒಂದು. ಮಹಾರಾಷ್ಟ್ರದ ಭಕ್ತರು ಇಲ್ಲಿಗೆ ದರ್ಶನಕ್ಕಾಗಿ ಹೆಚ್ಚಾಗಿ ಬರುತ್ತಾರೆ. ಆದರೆ, ಅಲ್ಲಿ ಕೊರೊನಾ ಪ್ರಕರಣ ಜಾಸ್ತಿ ಇದ್ದಿದ್ದರಿಂದ 2020ರ ಮಾರ್ಚ್‌ 23ರಂದು ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಅಂದಿನಿಂದ 10 ತಿಂಗಳ ಕಾಲ ನಿರ್ಬಂಧ ಮುಂದುವರಿದಿತ್ತು. ಕೋವಿಡ್ ತಗ್ಗಿದ್ದರಿಂದ 2021ರ ಫೆ.1ರಂದು ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಮತ್ತೆ ಕೊರೊನಾ ಹೆಚ್ಚಾದ್ದರಿಂದಾಗಿ ಇಪ್ಪತ್ತೇ ದಿನಗಳಲ್ಲಿ ನಿರ್ಬಂಧ ವಿಧಿಸಲಾಯಿತು. ಒಟ್ಟು 18 ತಿಂಗಳಲ್ಲಿ 20 ದಿನಗಳಷ್ಟೇ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅನುಮತಿ ಸಿಕ್ಕಿದೆ. ಈಗಲೂ ನಿರ್ಬಂಧ ಮುಂದುವರಿದಿದೆ.

ಸಾವಿರಾರು ಕುಟುಂಬ ಕಂಗಾಲು:ಗುಡ್ಡದಲ್ಲಿ ತೆಂಗಿನಕಾಯಿ, ಕುಂಕುಮ-ಭಂಡಾರ, ಬಾಳೆಹಣ್ಣು, ಸೀರೆ-ಕುಪ್ಪಸ, ಬಳೆಗಳು, ಮಿಠಾಯಿ ಮಾರುತ್ತಲೇ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅವರ ಪಾಲಿಗೆ ಯಲ್ಲಮ್ಮನಗುಡ್ಡವೇ ಆಧಾರ. ಆದರೆ, ಒಂದೂವರೆ ವರ್ಷದಿಂದ ನಿರ್ಬಂಧ ಇರುವುದರಿಂದ ವ್ಯಾಪಾರವಿಲ್ಲದೆ ಅವರೆಲ್ಲ ಕಂಗಾಲಾಗಿದ್ದಾರೆ. ಬದುಕು ಸಾಗಿಸಲು ಪರದಾಡುತ್ತಿದ್ದಾರೆ.

‘ನಮ್ಮ ಪೂರ್ವಜರೂ ಇಲ್ಲಿ ವ್ಯಾಪಾರ ಮಾಡುತ್ತಿದ್ದರು. ನಾವೂ ಮುಂದುವರಿಸಿದ್ದೇವೆ. ಇಲ್ಲಿ ಬರುವ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇವೆ. ಆದರೆ, ಈಗ ಭಕ್ತರೇ ಬಾರದ್ದರಿಂದ ಕೆಲಸವಿಲ್ಲದೆ ಪರದಾಡುತ್ತಿದ್ದೇವೆ. ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ದೇವಸ್ಥಾನ ಪ್ರವೇಶಿಸಲು ಭಕ್ತರಿಗೆ ಅನುಮತಿ ನೀಡಬೇಕು’ ಎಂದು ವ್ಯಾಪಾರಿಗಳಾದ ಬಾಪುಸಾಬ್ ಚೂರಿಖಾನ್, ಮಂಜುನಾಥ ಸುಂಕದ, ನವೀನ್ ಹನಶಿ, ಮುತ್ತಪ್ಪ ಹನಶಿ, ಯಲ್ಲಪ್ಪ ಸವದತ್ತಿ ಹಾಗೂ ಲಕ್ಷ್ಮವ್ವ ಹಿರೇಕುಂಬಿ ಒತ್ತಾಯಿಸಿದರು.

‘ಕೊರೊನಾ ಮುಂಜಾಗ್ರತೆ ವಹಿಸಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ದರ್ಶನಕ್ಕೆ ಸಮಯ ನಿಗದಿಪಡಿಸಬೇಕು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಅವರ ಆರೋಗ್ಯ ದೃಷ್ಟಿಯಿಂದ ಅಗತ್ಯ ಕ್ರಮ ವಹಿಸಿ ಹೇಗೆ ದೇವಸ್ಥಾನ ಆರಂಭಿಸಬಹುದು ಎನ್ನುವ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಲಾಗಿದೆ’ ಎಂದು ದೇವಸ್ಥಾನದ ಇಒ ರವಿ ಕೋಟಾರಗಸ್ತಿ ಹೇಳಿದರು.

‘ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡುವ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಬಳಿಕ, ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಇಲ್ಲಿನ ಶಾಸಕ ಆನಂದ ಮಾಮನಿ ತಿಳಿಸಿದರು.

‘ರಾಜ್ಯದಾದ್ಯಂತ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿವೆ. ಹೀಗಾಗಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ದೇವಸ್ಥಾನ ಆರಂಭಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ತಜ್ಞರರೊಂದಿಗೆ ಸಭೆ ನಡೆಸಿ ಕ್ರಮ ವಹಿಸಲಾಗುವುದು’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದರು.

ಸಭೆ ನಡೆಸಿ ಕ್ರಮ
ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಶೀಘ್ರವೇ ಸಭೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು.
–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ಲಸಿಕೆ ಸಿಕ್ಕ ನಂತರ ಸೂಕ್ತ
ಸವದತ್ತಿ ತಾಲೂಕಿನಲ್ಲಿ ಶೇ.70ರಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಲಸಿಕಾಕರಣ ಪ್ರಕ್ರಿಯೆ ಶೇ.100ರಷ್ಟು ಆದ ನಂತರವೇ ದೇವಸ್ಥಾನ ತೆರೆಯುವುದು ಸೂಕ್ತ.
–ಡಾ.ಮಹೇಶ ಚಿತ್ತರಗಿ, ಟಿಎಚ್‌ಒ, ಸವದತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT