ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020| ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಿದ ‘ಕೋವಿಡ್’!

ಅಪಾರ ಪ್ರಮಾಣದ ಹಸಿ, ಒಣ ಗಾಂಜಾ ವಶಕ್ಕೆ
Last Updated 29 ಡಿಸೆಂಬರ್ 2020, 7:21 IST
ಅಕ್ಷರ ಗಾತ್ರ

ಬೆಳಗಾವಿ: 2020ನೇ ವರ್ಷದಲ್ಲಿ ಕೋವಿಡ್–19 ಪರಿಣಾಮ ಅಪರಾಧ ಚಟುವಟಿಕೆಗಳಿಗೆ ‘ಕಡಿವಾಣ’ ಬಿದ್ದಿತು.

ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡು ಹಲವರನ್ನು ಬಂಧಿಸಿದ ವರ್ಷವಿದು. ಜೊತೆಗೆ, ಟೈಗರ್ ಗ್ಯಾಂಗ್ ಬಂಧನ, ಚಲನಚಿತ್ರ ಗೀತರಚನೆಕಾರ ಕೆ.ಕಲ್ಯಾಣ್ ದಂಪತಿ ದಾಂಪತ್ಯ ಕಲಹ ಹಾಗೂ ಅಪಹರಣ ಮತ್ತು ಖೋಟಾ ನೋಟಿನ ಪ್ರಕರಣಗಳು ಗಮನಸೆಳೆದವು.

‘ಅಡುಗೆ ಕೆಲಸದ ಮಹಿಳೆ ತನ್ನ ಪರಿಚಯದ ವ್ಯಕ್ತಿಯೊಂದಿಗೆ ಸೇರಿಕೊಂಡು ನನ್ನ ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಾರೆ’ ಎಂದು ಚಲನಚಿತ್ರ ಗೀತರಚನೆಕಾರ ಕೆ. ಕಲ್ಯಾಣ್ ಮಾಳಮಾರುತಿ ಠಾಣೆಗೆ ಸೆ. 30ರಂದು ದೂರು ನೀಡಿದ್ದರು. ಇದರೊಂದಿಗೆ ಅವರ ದಾಂಪತ್ಯ ಕಲಹ ಬೀದಿಗೆ ಬಂದಿತ್ತು.

ಮಾಟ–ಮಂತ್ರ ಮಾಡಿ ವಶೀಕರಣ ಮಾಡಿಕೊಂಡಿದ್ದ ಆರೋಪಿ ಶಿವಾನಂದ ವಾಲಿ ಎನ್ನುವವರನ್ನು ಇನ್‌ಸ್ಪೆಕ್ಟರ್ ಮಾರುತಿ ಗಡ್ಡೇಕರ ಹಾಗೂ ತಂಡದವರು ಬಂಧಿಸಿ, ಕಲ್ಯಾಣ್ ಪತ್ನಿ ಕುಟುಂಬದಿಂದ ತನ್ನ ಹೆಸರಿಗೆ ಬರೆಸಿಕೊಂಡಿದ್ದ ₹ 6 ಕೋಟಿಗೂ ಹೆಚ್ಚಿನ ಮೌಲ್ಯದ ನಿವೇಶನ, ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು, ಆಭರಣ ಮತ್ತು ವಾಹನಗಳನ್ನು ವಶ‍‍ಕ್ಕೆ ಪಡೆದಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಕಲ್ಯಾಣ್ ಪತ್ನಿ ಅಶ್ವಿನಿ ವಿವಾಹ ವಿಚ್ಛೇದನ ಅರ್ಜಿ ವಾಪಸ್ ಪಡೆಯುವುದರೊಂದಿಗೆ ಪ್ರಕರಣ ಸುಂಖಾಂತ್ಯಗೊಂಡಿತು. ಪ್ರಕರಣದ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಲಾಕ್‌ಡೌನ್‌ ಆದೇಶದ ಅನುಷ್ಠಾನ ಕಾರ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಿಆರ್‌ಪಿಎಫ್‌ ಯೋಧ ಒಬ್ಬರನ್ನು ಸದಲಗಾ ಠಾಣೆ ಪೊಲೀಸರು ಏ.23ರಂದು ಬಂಧಿಸಿದ್ದರು. ಆದರೆ, ಆರೋಪಿಯನ್ನು ಪೊಲೀಸರು ನಡೆಸಿಕೊಂಡ ರೀತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸದ್ದು ಮಾಡಿತ್ತು. ಸಿಆರ್‌ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅನಿಲ ಕಂಬಾರ ಅವರನ್ನು ಅಮಾನತು ಮಾಡಲಾಗಿತ್ತು.

ಪ್ರಮುಖ ಪ್ರಕರಣಗಳು

* ಫೆ.4: ಬೆಳಗಾವಿಯ ಅನಗೋಳದಲ್ಲಿ ಮರಗಾಯಿದೇವಿ ಜಾತ್ರಾ ಮಹೋತ್ಸವ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲುತೂರಾಟ.

* ಮಾರ್ಚ್‌ 19: ವ್ಯಕ್ತಿಯೊಬ್ಬರನ್ನು ಅಪಹರಿಸಿ, ₹ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ 11 ಮಂದಿ ಆರೋಪಿಗಳು ಚಿಕ್ಕೋಡಿ ಪೊಲೀಸರಿಂದ ಬಂಧನ.

* ಮಾರ್ಚ್ 20: ವ್ಯಕ್ತಿಯೊಬ್ಬರಿಗೆ ಕೋವಿಡ್ ಬಂದಿದೆ ಎಂದು ವದಂತಿ ಹರಡಿದ್ದ ವ್ಯಕ್ತಿ ಬೆಳಗಾವಿಯಲ್ಲಿ ಬಂಧನ.

* ಮಾರ್ಚ್‌ 23: ರೈಲಿನಲ್ಲಿ ಪ್ರಯಾಣಿಕರಿಗೆ ಮತ್ತು ಬರುವ ಚಾಕೊಲೇಟ್‌ ತಿನ್ನಿಸಿ ಅವರಿಂದ ಕಳವು ಮಾಡುತ್ತಿದ್ದ ಗ್ಯಾಂಗ್‌ನ ಮೂವರು ರೈಲ್ವೆ ಪೊಲೀಸರಿಂದ ಬಂಧನ.

* ಏ. 27: ಅಥಣಿ ತಾಲ್ಲೂಕಿನ ಶಿರೂರ ಬಳಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ತಹಶೀಲ್ದಾರ್‌ ಕಾರಿನ ಚಾಲಕನ ಮೇಲೆ ಟ್ರ್ಯಾಕ್ಟರ್‌ ಹಾಯಿಸಿ ಕೊಲ್ಲಲು ಯತ್ನಿಸಿದ ಘಟನೆ ನಡೆದಿತ್ತು. ಏ.30ರಂದು ನಾಲ್ವರು ಆರೋಪಿಗಳ ಬಂಧನ.

* ಮೇ 9: ವ್ಯಕ್ತಿ ಅಪಹರಿಸಿ ತಮ್ಮ ಬಂಧನದಲ್ಲಿಟ್ಟುಕೊಂಡು, ಅವರಿಂದ ಆಸ್ತಿ ಹಾಗೂ ಹಣ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಒಂಬತ್ತು ಮಂದಿ ಮಾರ್ಕೆಟ್‌ ಠಾಣೆ ಪೊಲೀಸರಿಂದ ಬಂಧನಕ್ಕೆ ಒಳಗಾದರು.

* ಮೇ 6: ಗೋಕಾಕದಲ್ಲಿ ನಡೆದಿದ್ದ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳು (ಟೈಗರ್ ಗ್ಯಾಂಗ್) ಮತ್ತು ಅವರ ಸಹಚರರ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು, ₹ 30.48 ಲಕ್ಷ ನಗದು, ಮಾರಕಾಸ್ತ್ರ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

* ಮೇ 13: ಚಿಕ್ಕೋಡಿ ತಾಲ್ಲೂಕಿನ ಜಾಗನೂರ ಗ್ರಾಮದಲ್ಲಿ, ಕಬ್ಬು ಕಟಾವಿಗೆ ಪೋಷಕರೊಂದಿಗೆ ಬಂದಿದ್ದ ಬಾಲಕಿಯ ಬಳಿ ಇದ್ದ ₹ 20 ಕಿತ್ತುಕೊಳ್ಳುವುದಕ್ಕಾಗಿ ಬಾವಿಗೆ ತಳ್ಳಿ ಕೊಲೆ ಮಾಡಿದ ಘಟನೆ ವರದಿ.

* ಆ.7: ಖೋಟಾ ನೋಟಿನ ಬಂಡಲ್‌ಗಳನ್ನು ಸಿದ್ಧಪಡಿಸಿದ್ದ, ಜನರಿಗೆ ಮೋಸ ಮಾಡಲು ಯೋಜಿಸಿದ್ದ ನಾಲ್ವರನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದರು.

* ಸೆ. 26: ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ ಲಕ್ಷ್ಮಿನಗರದ ಹೊರವಲಯದಲ್ಲಿ ಐದು ತಿಂಗಳ ಗರ್ಭಿಣಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಐವರನ್ನು ನಂತರ ಬಂಧಿಸಲಾಯಿತು.

* ಅ. 7: ಅಥಣಿ ತಾಲ್ಲೂಕಿನ ಅವರಕೋಡ ಬಳಿ ಕೃಷ್ಣಾ ನದಿಯಲ್ಲಿ ತೇಲಿ ಬಂದ ವ್ಯಕ್ತಿಯ ಮೃತ ದೇಹದೊಂದಿಗಿದ್ದ ಬ್ಯಾಗ್‌ನಲ್ಲಿ 1.5 ಕೆ.ಜಿ. ಬಂಗಾರ ಪತ್ತೆಯಾಗಿತ್ತು.

* ನ. 5: ಧಾರವಾಡದ ಜಿ.ಪಂ. ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಹಿಂಡಲಗಾ ಕಾರಾಗೃಹದಲ್ಲಿ ಇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT