ಬುಧವಾರ, ಆಗಸ್ಟ್ 10, 2022
24 °C

ಡಿ.ಸಿ. ಕಚೇರಿಯಲ್ಲೇ ಮುಂಜಾಗ್ರತಾ ಕ್ರಮವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್–19 ಎರಡನೇ ಅಲೆಯ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಇರುವುದರಿಂದ, ವಿವಿಧ ಕೆಲಸಗಳಿಗಾಗಿ ನಿತ್ಯವೂ (ರಜಾ ದಿನ ಹೊರತುಪಡಿಸಿ)  ನೂರಾರು ಮಂದಿ ಭೇಟಿ ನೀಡುತ್ತಾರೆ. ಅವರ ದೇಹದ ಉಷ್ಣತೆ ತಪಾಸಣೆ ಮಾಡುವ ಕಾರ್ಯವನ್ನು ಇತ್ತೀಚೆಗೆ ನಿಲ್ಲಿಸಲಾಗಿದೆ. ತಪಾಸಣೆಗೆ ಒಳಗಾಗದೆ ಯಾರು ಬೇಕಾದರೂ ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್ ಪ್ರವೇಶಿಸಬಹುದು ಎನ್ನುವಂತಹ ಪರಿಸ್ಥಿತಿ ಅಲ್ಲಿದೆ!

ಕಚೇರಿಯ ಗೇಟ್‌ ಪಕ್ಕದಲ್ಲಿ ಪೆಂಡಾಲ್ ಹಾಕಿ ಚೌಕಿ ಸ್ಥಾಪಿಸಲಾಗಿದೆಯಾದರೂ ಅಲ್ಲೀಗ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸುತ್ತಿಲ್ಲ. ಅದೀಗ ಡ್ಯೂಟಿಯಲ್ಲಿರುವ ಪೊಲೀಸ್‌ ಸಿಬ್ಬಂದಿಗೆ ‘ನೆರಳಿನ ತಾಣ’ವಾಗಿ ಹೋಗಿದೆ.

ಈ ಕಚೇರಿಯಲ್ಲಿ ಸ್ಯಾನಿಟೈಸರ್ ವ್ಯವವ್ಥೆಯನ್ನೂ ಮಾಡಿಲ್ಲ. ಜಿಲ್ಲಾಧಿಕಾರಿ ಕಚೇರಿ ಬಾಗಿಲಿನ ಪಕ್ಕದಲ್ಲಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ಸ್ಯಾನಿಟೈಸರ್ ಡಿಸ್ಪೆನ್ಸರಿಗಳನ್ನು ಇಡಲಾಗಿದೆ. ಆದರೆ, ಅವುಗಳಲ್ಲಿ ಸ್ಯಾನಿಟೈಸರ್ ಇಲ್ಲವೇ ಇಲ್ಲ! ಮರು ತುಂಬಿಸುವ ಕೆಲಸವನ್ನು ಸಂಬಂಧಿಸಿದವರು ಮಾಡಿಲ್ಲ. ಹೀಗಾಗಿ, ಅವು ‘ಪ್ರದರ್ಶನ’ಕ್ಕೆ ಎನ್ನುವಂತಾಗಿ, ಪ್ರಾಯೋಜಿಸಿದವರಿಗೆ ಪ್ರಚಾರದ ಸಾಮಗ್ರಿಯಾಗಷ್ಟೇ ಉಳಿದಿವೆ. ಸಂದರ್ಶಕರು ಬಳಸಬೇಕೆಂದರೂ ಅಲ್ಲಿ ಸ್ಯಾನಿಟೈಸರ್ ಲಭ್ಯತೆ ಇಲ್ಲವಾಗಿದೆ. ಇದು, ಕೋವಿಡ್ ಹರಡುವಿಕೆ ತಡೆಯುವ ಕಾರ್ಯಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಪ್ರಸ್ತುತ ಕೋವಿಡ್ ಹರಡುವುದನ್ನು ತಡೆಯುವ ಉದ್ದೇಶದಿಂದ ಮುಖಗವಸು ಬಳಸುವುದು ಕಡ್ಡಾಯ ಎನ್ನುತ್ತದೆ ಸರ್ಕಾರದ ನಿಯಮ. ಆದರೆ, ಜಿಲ್ಲಾಧಿಕಾರಿ ಕಚೇರಿಯೂ ಸೇರಿದಂತೆ ಅಲ್ಲಿನ ವಿವಿಧ ಕಚೇರಿಗಳ ಬಹುತೇಕ ಸಿಬ್ಬಂದಿ ಈ ನಿಯಮವನ್ನು ಪಾಲಿಸುತ್ತಿಲ್ಲದಿರುವುದು ಮಂಗಳವಾರ ಕಂಡುಬಂತು. ಕೆಲವು ಮಂದಿಯಷ್ಟೇ ಮಾಸ್ಕ್‌ ಬಳಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.