ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕಾರಿಣಿಗೆ ಕೊರೊನಾ ಅಡ್ಡಿಯಾಗುವುದಿಲ್ಲವೇ?: ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟೀಕೆ

Last Updated 4 ಡಿಸೆಂಬರ್ 2020, 12:56 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಕೋವಿಡ್ ಕಾರಣದಿಂದಾಗಿ ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆಯೋಜಿಸಿದೆ. ಇದಕ್ಕೆ ಕೊರೊನಾ ಅಡ್ಡಿ ಆಗುವುದಿಲ್ಲವೇ?’ ಎಂದು ಶಾಸಕಿ ಹಾಗೂ ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ ಕೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುವರ್ಣ ವಿಧಾನಸೌಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯದ ಸಂದೇಶಗಳನ್ನು ಹಾಕಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳದೆ ಇರುವುದು ಇದಕ್ಕೆ ಕಾರಣ. ಕಳೆದ ವರ್ಷವೂ ಇಲ್ಲಿ ಅಧಿವೇಶನ ನಡೆಸಿಲ್ಲ. ಈ ಬಾರಿಯೂ ಇಲ್ಲವೆಂದು ಸರ್ಕಾರ ಹೇಳಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.

‘ಎರಡು ಬಾರಿ ಪ್ರವಾಹ ಉಂಟಾಗಿ ಅಪಾರ ನಷ್ಟವಾದರೂ ಸರ್ಕಾರ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಒದಗಿಸಿಲ್ಲ. ಕೇಂದ್ರವೂ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬರಬೇಕಾದ ಜಿಎಸ್‌ಟಿ ಹಣವನ್ನೂ ಕೊಟ್ಟಿಲ್ಲ. ಹೀಗಿರುವಾಗ ಇಲ್ಲಿ ಕಾರ್ಯಕಾರಿಣಿ ನಡೆಸುವುದು ರಾಜಕೀಯ ಗಿಮಿಕ್ ಆಗಬಾರದು’ ಎಂದರು.

‘ಪ್ರವಾಹ ಪರಿಹಾರಕ್ಕೆ ಕೋವಿಡ್ ಕಾರಣದಿಂದ ಅನುದಾನದ ಕೊರತೆ ಎನ್ನುವ ಸರ್ಕಾರ, ಬೇರೆಯದಕ್ಕೆಲ್ಲ ಅನಗತ್ಯವಾಗಿ ಖರ್ಚು ಮಾಡುತ್ತಿದೆ. ಸರ್ಕಾರದ ದೃಷ್ಟಿ ಕೇವಲ ಚುನಾವಣೆಯತ್ತ ಮಾತ್ರವೇ ಇದೆ. ಜನರ ಹಿತವನ್ನು ಸಂಪೂರ್ಣ ಕಡೆಗಣಿಸಿದೆ’ ಎಂದು ದೂರಿದರು.

‘ಪ್ರವಾಹದಿಂದಾಗಿ ನೂರಾರು ಕೆರೆ, ರಸ್ತೆ, ಸೇತುವೆಗಳು ಹಾಳಾಗಿವೆ. ಉತ್ತರ ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ, ದುರಸ್ತಿಗೆ ಸರ್ಕಾರ ಗಮನವನ್ನೇ ಹರಿಸುತ್ತಿಲ್ಲ. ನನ್ನ ಗ್ರಾಮೀಣ ಕ್ಷೇತ್ರದಲ್ಲೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯಾಗಿದೆ. ಹೋರಾಟ ಮಾಡಿ ಹಣ ತರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುವುದಾಗಿ ಸರ್ಕಾರ ಮಾಡಿದ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಯಾರಿಗೂ ನೆರವು ಸಿಕ್ಕಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಲು ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಬೇಕಿತ್ತು. ಆದರೆ, ಸರ್ಕಾರ ಕೇವಲ ಸಂಪುಟ ವಿಸ್ತರಣೆಯಲ್ಲೇ ಹಾಗೂ ವಿವಾದದಲ್ಲೇ ಕಾಲ ಕಳೆಯುತ್ತಿದೆ’ ಎಂದು ಟೀಕಿಸಿದರು.

‘ಸಾಂಬ್ರಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಕೃಷ್ಣ ಆನಗೋಳಕರ ಕಾಂಗ್ರೆಸ್ ಪರ ದುಡಿದಿಲ್ಲ. ಹೋದ ಚುನಾವಣೆಯಲ್ಲೂ ನನ್ನ ವಿರುದ್ಧವೇ ಕೆಲಸ ಮಾಡಿದ್ದರು’ ಎಂದು ಹೇಳಿದರು.

‘ರಾಜಕಾರಣದಲ್ಲಿ ಷಡ್ಯಂತ್ರ ರೂಪಿಸುವುದು ಸಾಮಾನ್ಯ. ಏಕಾಂಗಿ ಹೋರಾಟ ನನಗೇನೂ ಹೊಸದಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT