ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಸಮರ್ಪಕ ಪೂರೈಕೆಗೆ ಕ್ರಮ: ಎಂ.ಜಿ.ಹಿರೇಮಠ

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ
Last Updated 16 ಮೇ 2021, 14:33 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಈ ಹಿಂದೆ ಜಿಲ್ಲೆಗೆ 15 ಕೆ.ಎಲ್. ಪೂರೈಕೆ ಆಗುತ್ತಿತ್ತು. ಈಚೆಗೆ ಅದು 22 ಕೆ.ಎಲ್.ಗೆ ಏರಿಕೆಯಾಗಿದೆ. ಸ್ಥಳೀಯವಾಗಿ 3 ಕಂಪನಿಗಳಿಂದ 5 ಕೆ.ಎಲ್. ತಯಾರಿಕೆ ಆಗುತ್ತಿದ್ದು, ಕ್ರಮಬದ್ಧವಾಗಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದರು.

‘ಜಿಲ್ಲಾ ಕೇಂದ್ರದಲ್ಲಿ ಒಂದು ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಂ ಸ್ಥಾಪಿಸಲಾಗಿದೆ. ಅಲ್ಲಿ ಹೊಂ ಐಸೂಲೇಷನ್‌ನಲ್ಲಿ ಇರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ವಿಚಾರಿಸಲಾಗುತ್ತಿದೆ. ಅವರ ಪ್ರಥಮ ಸಂಪರ್ಕಿತರು ಹೋಂ ಕ್ವಾರಂಟೈನ್‌ ಇರುವ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಎಲ್ಲ ತಾಲ್ಲೂಕುಗಳಲ್ಲಿ ಒಟ್ಟು 25 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅಲ್ಲಿ ‍66 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಹಾಸಿಗೆಗಳು ಲಭ್ಯ:

‘ಹಾಸ್ಟೆಲ್, ಯಾತ್ರಿ ನಿವಾಸ ಹಾಗೂ ಕಾಲೇಜುಗಳಲ್ಲಿ ಒಟ್ಟು 980 ಮತ್ತು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 320 ಹಾಸಿಗೆಗಳು ಲಭ್ಯ ಇವೆ’ ಎಂದರು.

‘ಜಿಲ್ಲೆಗೆ 38,77,504 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ನೀಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ 6,72,232 ಜನರಿಗೆ ಹಾಕಲಾಗಿದೆ. 5,44,589 ಮಂದಿ ಮೊದಲನೇ ಡೋಸ್ ಪಡೆದಿದ್ದಾರೆ. 2ನೇ ಡೋಸ್ ಕೂಡ ಪಡೆದವರ ಸಂಖ್ಯೆ 1,27,643 ಆಗಿದೆ. 4,16,946 ಜನ 2ನೇ ಡೋಸ್ ಪಡೆಯಬೇಕಾಗಿದೆ‌. ಕೇಂದ್ರದಿಂದ 1,190 ವಯಲ್ ಹಾಗೂ ರಾಜ್ಯದಿಂದ 2,480 ವಯಲ್ ಸೇರಿ ಒಟ್ಟು 3,670 ವಯಲ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಆಗಿದೆ. ಅಂತೆಯೇ ಕೇಂದ್ರದಿಂದ 9,080 ವಯಲ್ ಹಾಗೂ ರಾಜ್ಯದಿಂದ 12,560 ವಯಲ್‌ ಸೇರಿ 21,640 ವಯಲ್ ಕೋವಿಶೀಲ್ಡ್‌ ಲಸಿಕೆ ಪೂರೈಕೆಯಾಗಿದೆ’ ಎಂದು ವಿವರ ನೀಡಿದರು.

47 ಮಂದಿ ಸಾವು:

‘18ರಿಂದ 44 ವರ್ಷದವರಲ್ಲಿ 22,95,518 ಮಂದಿಗೆ ಲಸಿಕೆ ನೀಡಿಕೆ ಗುರಿ ಇದೆ. ಈವರೆಗೆ 4,125 ಮಂದಿದೆ ಕೊಡಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಏ.1ರಿಂದ ಮೇ 15ರವರೆಗೆ 12,902 ರೆಮ್‌ಡಿಸಿವಿರ್‌ ಚುಚ್ಚುಮದ್ದುಗಳು ‌ಪೂರೈಕೆಯಾಗಿವೆ. 12,750 ನೀಡಲಾಗಿದೆ. 152 ಚುಚ್ಚುಮದ್ದು ಜಿಲ್ಲಾ ಉಗ್ರಾಣದಲ್ಲಿವೆ. ಖಾಸಗಿ ಆಸ್ಪತ್ರೆಗಳಿಗೆ 12,561 ನೀಡಲಾಗಿದೆ. ಆಸ್ಪತ್ರೆಯವರು ಜಾಲತಾಣದಲ್ಲಿ ನೋಂದಾಯಿಸಿದಾಗ ನೇರವಾಗಿ ಪೂರೈಸಲಾಗುತ್ತಿದೆ. ಎಲ್ಲರಿಗೂ ರೆಮ್‌ಡಿಸಿವಿರ್ ಅಗತ್ಯ ಇರುವುದಿಲ್ಲ; ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು’ ಎಂದು ತಿಳಿಸಿದರು.

‘ಮಾರ್ಚ್‌ 17ರಿಂದ ಮೇ 15ರವರೆಗೆ ಜಿಲ್ಲೆಯಲ್ಲಿ 1,82,740 ಮಂದಿಯಿಂದ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. 17,982 ಜನರಲ್ಲಿ ಕೋವಿಡ್ ದೃಢಪಟ್ಟಿದೆ. 7,580 ಜನ ಗುಣಮುಖರಾಗಿದ್ದಾರೆ. 8,320 ಮಂದಿ ಹೋಂ ಐಸೊಲೇಷನ್‌ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 2,144 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 47 ಮಂದಿ ಮರಣ ಹೊಂದಿದ್ದಾರೆ. ಪಾಸಿಟಿವಿಟಿ ರೇಟ್ 10 ದಿನಗಳಿಂದ ಶೇ 38.43 ಆಗಿದೆ. ಗುಣಮುಖರಾದವರ ಪ್ರಮಾಣ ಶೇ 75.91 ಆಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT