ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಬೀದಿ ನಾಟಕ ಕಲಾವಿದರ ಬದುಕು ಅತಂತ್ರ

ಕೊರೊನಾ ಕಾರಣದಿಂದ ಸ್ಥಗಿತವಾಗಿರುವ ಕಾರ್ಯಕ್ರಮಗಳು
Last Updated 20 ನವೆಂಬರ್ 2020, 13:52 IST
ಅಕ್ಷರ ಗಾತ್ರ

ಚಿಕ್ಕೋಡಿ: ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಬೀದಿ ನಾಟಕ ಕಲಾವಿದರ ಬದುಕು ಕೊರೊನಾದಿಂದಾಗಿ ಬೀದಿಗೆ ಬಂದಿದೆ.

ಜೀವನ ನಿರ್ವಹಣೆಗೆ ಈ ಕಲಾ ಮಾಧ್ಯಮವನ್ನೇ ನೆಚ್ಚಿಕೊಂಡಿರುವ ಅವರು ಹಲವು ತಿಂಗಳುಗಳಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬಾಲ್ಯವಿವಾಹ ತಡೆ, ಬಾಲಕಾರ್ಮಿಕ ಪದ್ಧತಿ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ, ವರದಕ್ಷಿಣೆ ಪಿಡುಗು, ಮದ್ಯಪಾನ, ಮಾದಕ ವಸ್ತುಗಳ ನಿರ್ಮೂಲನೆ, ಮೂಢನಂಬಿಕೆ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಕಾರ್ಯದಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಪರಿಸರ ಕಾಳಜಿ, ನೀರಿನ ಸದ್ಬಳಕೆ, ಶಿಕ್ಷಣ ಜಾಗೃತಿ, ಮಹಿಳಾ-ಮಕ್ಕಳ ಹಕ್ಕು, ಸಾಂಕ್ರಾಮಿಕ ರೋಗಗಳನ್ನು ತಡೆಯುವುದು, ಪ್ಲಾಸ್ಟಿಕ್ ನಿಷೇಧ ಕುರಿತು ಸಮಾಜದಲ್ಲಿ ಪ್ರಚಾರಕ್ಕೆ ತಮ್ಮ ಕಲೆಯನ್ನು ಬಳಸುತ್ತಿದ್ದರು.

ಸಾವಿರಾರು ಮಂದಿ:

ಇಂತಹ ಬೀದಿನಾಟಕ ಕಲಾ ತಂಡಗಳನ್ನು ಸರ್ಕಾರ ಸುಮಾರು ವರ್ಷಗಳಿಂದ ಬಳಸಿಕೊಳ್ಳುತ್ತಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ನಗರ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಬರಲಾಗುತ್ತಿತ್ತು. ರಾಜ್ಯದಲ್ಲಿ ಬೀದಿನಾಟಕದ ಜೊತೆ ಗೀಗೀ ಪದ, ಚೌಡಕಿ ಪದ ಮೊದಲಾದವುಗಳ ಕಲಾ ತಂಡಗಳಲ್ಲಿ 7ಸಾವಿರಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ತೊಡಗಿಕೊಂಡಿದ್ದಾರೆ. ತಮ್ಮದೇ ಆದ ಹಾಡುಗಳನ್ನು ರಚಿಸಿ ಅದಕ್ಕೆ ರಾಗ ಜೋಡಿಸಿ ಬೀದಿ ಬೀದಿಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಜನರು ವೀಕ್ಷಿಸಿ, ಮನರಂಜನೆ ಪಡೆಯುವ ಜೊತೆಗೆ ವಿಷಯವನ್ನು ತಿಳಿದುಕೊಳ್ಳುತ್ತಿದ್ದರು.

ಎಲ್‌ಇಡಿ ವಾಹನ ಬಳಕೆ:

‘ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಕಾರ್ಯಕ್ರಮ ರೂಪಿಸದೆ ಬೇರೆ ರಾಜ್ಯದ ಕಂಪನಿಗಳಿಗೆ ಗುತ್ತಿಗೆ ನೀಡಿ, ಎಲ್.ಇ.ಡಿ. ಪರದೆಯುಳ್ಳ ವಾಹನಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದೆ. ತಾಂತ್ರಿಕತೆಗೂ ಜೀವಂತ ಕಲೆಗೂ ತುಂಬಾ ವ್ಯತ್ಯಾಸವಿದೆ. ಬೀದಿ ನಾಟಕ ಕಲೆಯನ್ನೇ ಅವಲಂಬಿಸಿರುವ ನಾವು ತೊಂದರೆಗೆ ಒಳಗಾಗಿದ್ದೇವೆ’ ಎಂದು ಮೂರು ದಶಕಗಳಿಂದ ಕಲಾ ತಂಡ ಕಟ್ಟಿಕೊಂಡು ಬೀದಿ ನಾಟಕ ಪ್ರದರ್ಶನ ನೀಡುತ್ತಿರುವ ತಾಲ್ಲೂಕಿನ ಧುಳಗನವಾಡಿಯ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಭರತ ಕಲಾಚಂದ್ರ ಅಳಲು ತೋಡಿಕೊಂಡರು.

‘ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸರ್ಕಾರ, ಬೀದಿನಾಟಕ ಕಲಾವಿದರನ್ನು ಬೀಡುವುದು ಎಷ್ಟು ಸಮಂಜಸ? ಎಲ್‌ಇಡಿ ವಾಹನಗಳ ಬದಲಿಗೆ ಬೀದಿನಾಟಕ ಕಲಾವಿದರಿಗೆ ಅವಕಾಶ ನೀಡುವಂತೆ ರಾಜ್ಯ ಬೀದಿನಾಟಕ ಒಕ್ಕೂಟದಿಂದ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ, ಸಂಬಂಧಿಸಿದ ಇಲಾಖೆಗೆ, ಜಿಲ್ಲಾ ಉಸ್ತವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಕೂಡಲೇ ನಮ್ಮ ನೆರವಿಗೆ ಬರಬೇಕು. ಬೀದಿ ನಾಟಕ ಪ್ರದರ್ಶನಕ್ಕೆ ಆದ್ಯತೆ ನೀಡಿ ಕಲೆ ಮತ್ತು ಕಲಾವಿದರನ್ನು ಪೋಷಿಸಬೇಕು’ ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT