ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೋವಿಡ್‌–19 ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆ

Last Updated 22 ಮೇ 2020, 15:41 IST
ಅಕ್ಷರ ಗಾತ್ರ

ಬೆಳಗಾವಿ: ಜಾರ್ಖಂಡ್‌ ಯಾತ್ರಾಸ್ಥಳದಿಂದ ಮರಳಿ ಬಂದಿದ್ದ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 75 ವರ್ಷದ ವ್ಯಕ್ತಿಗೆ (ಪಿ–1687) ಕೋವಿಡ್‌–19 ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದವರ ಸಂಖ್ಯೆ 120ಕ್ಕೆ ತಲುಪಿದಂತಾಗಿದೆ.

ಯಾತ್ರಾಸ್ಥಳಕ್ಕೆ ಹೋಗಿಬಂದಿದ್ದ ಇಂಗಳಿ ಗ್ರಾಮದ 6 ಜನರನ್ನು ಪ್ರಾಥಮಿಕ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಾರ್ಖಂಡ್‌ ಯಾತ್ರಾಸ್ಥಳಕ್ಕೆ ಜಿಲ್ಲೆಯಿಂದ ಹಲವರು ತೆರಳಿದ್ದರು. ಲಾಕ್‌ಡೌನ್‌ ಸಡಿಲಿಕೆಗೊಂಡ ನಂತರ ವಾಪಸ್ಸಾಗಿದ್ದಾರೆ. ಗುರುವಾರ ಕಾಗವಾಡದ ಮೂರು ಜನರಲ್ಲಿ ಸೋಂಕು ದೃಢಪಟ್ಟಿತ್ತು. ಈಗ ಮತ್ತೊಬ್ಬರಲ್ಲಿ ಸೋಂಕು ಕಂಡುಬಂದಿದ್ದು, ಒಟ್ಟು ಯಾತ್ರಾಸ್ಥಳದಿಂದ ಮರಳಿ ಬಂದ ನಾಲ್ಕು ಜನರಲ್ಲಿ ಸೋಂಕು ದೃಢಪಟ್ಟಿದೆ.

ಸ್ಥಳಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂದೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ತಹಶೀಲ್ದಾರ್‌ ಎಸ್.ಎಸ್ ಸಂಪಗಾಂವಿ ಸ್ಥಳಕ್ಕೆ ಭೇಟಿ ನೀಡಿ, ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಸೋಂಕಿತ ವ್ಯಕ್ತಿಯನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.

314 ಬಾಕಿ:ಹೊರರಾಜ್ಯಗಳಿಂದ ಬರುತ್ತಿರುವವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಸುಮಾರು 314 ವರದಿಗಳ ಫಲಿತಾಂಶ ಬರುವುದು ಬಾಕಿ ಇದೆ.

ಬೆಂಗಳೂರಿನಿಂದ ಆಗಮಿಸಿದ ರೈಲು:ಎರಡು ತಿಂಗಳ ಲಾಕ್‌ಡೌನ್‌ ನಂತರ ರೈಲು ಪ್ರಯಾಣ ಶುಕ್ರವಾರ ಆರಂಭಗೊಂಡಿತು. ಬೆಂಗಳೂರಿನಿಂದ ಬೆಳಿಗ್ಗೆ ಹೊರಟ ರೈಲು ಬೆಳಗಾವಿಗೆ ಸಂಜೆ 6.50ಕ್ಕೆ ಬಂದಿತು. ಸುಮಾರು 170 ಪ್ರಯಾಣಿಕರು ಬಂದಿಳಿದರು.

ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ದೇಹದ ಉಷ್ಣಾಂಶವನ್ನು ತಪಾಸಣೆಗೆ ಒಳಪಡಿಸಲಾಯಿತು. ಬಿಜೆಪಿಯ ಮಹಾನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ, ಮುರುಗೇಶ ಪಾಟೀಲ ಅವರು ಪ್ರತಿಯೊಬ್ಬರ ಪ್ರಯಾಣಿಕರಿಗೆ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದರು. ಪ್ರಯಾಣದ ನಂತರ ರೈಲನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT