ಗುರುವಾರ , ಜನವರಿ 23, 2020
28 °C
ಬೆಳಗಾವಿಯ ಎಸ್.ಎಸ್. ಸಾತೇರಿ ಆಕರ್ಷಣೆ

ಕುಂದಾನಗರಿಯಲ್ಲಿ ಕ್ರಿಕೆಟ್‌ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕರ್ನಾಟಕ–ಆಂಧ್ರಪ್ರದೇಶ ತಂಡಗಳ ನಡುವೆ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ ಭಾನುವಾರ ಆರಂಭವಾಗುವುದರೊಂದಿಗೆ ಇಲ್ಲಿನ ಕಣಬರ್ಗಿ ರಸ್ತೆಯ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ) ಮೈದಾನದಲ್ಲಿ ಕಲರವ ಕಂಡುಬಂದಿತು. ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿ ಖುಷಿಪಟ್ಟರು.

ಕೆಎಸ್‌ಸಿಎ ಉಪಾಧ್ಯಕ್ಷ ಜೆ. ಅಭಿರಾಮ್‌ ಅವರು ವಿನಾಯನ ಮೂರ್ತಿಗೆ ಪೂಜೆ ಸಲ್ಲಿಸಿ ಪಂದ್ಯವನ್ನು ಉದ್ಘಾಟಿಸಿದರು. ಉಭಯ ತಂಡಗಳ , ಆಟಗಾರರನ್ನು ಪರಿಚಯಿಸಿಕೊಂಡು ಶುಭ ಹಾರೈಸಿದರು. ಕೆಎಸ್‌ಸಿಎ ನಿರ್ದೇಶಕ ತಿಲಕ್‌ ನಾಯ್ಡು, ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ, ಮ್ಯಾಚ್‌ ರೆಫ್ರಿ ಶಕ್ತಿ ಸಿಂಗ್, ಅಂಪೈರ್‌ಗಳಾದ ನಿಖಿಲ್ ಮೆನನ್ ಹಾಗೂ ರಾಜೀವ್ ಗೋದರ, ಮೈದಾನದ ವ್ಯವಸ್ಥಾಪಕ ದೀಪಕ ಪವಾರ ಇದ್ದರು.

ಬೆಳಗಾವಿಯವರೇ ಆದ ಎಸ್.ಎಸ್. ಸಾತೇರಿ ವಿಶೇಷ ಆಕರ್ಷಣೆಯಾಗಿದ್ದಾರೆ. ವಿಕೆಟ್ ಕೀಪರ್‌ ಆಗಿರುವ ಅವರು ಮೊದಲ ದಿನದಾಟದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಪಡೆದು ಗಮನಸೆಳೆದರು. ತವರಿನಲ್ಲಿ ಅವರ ಅಟ ಕಣ್ತುಂಬಿಕೊಳ್ಳಲು ಕುಟುಂಬದವರು ಕೂಡ ಬಂದಿದ್ದು ವಿಶೇಷವಾಗಿತ್ತು.

ಕರ್ನಾಟಕ ತಂಡದ ಕೋಚ್ ಆಗಿರುವ ಅಯ್ಯಪ್ಪ ಕೂಡ ಆಕರ್ಷಣೆಯಾಗಿದ್ದಾರೆ. ವಿರಾಮದ ವೇಳೆಯಲ್ಲಿ ಅವರು ತಂಡದ ಆಟಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರನ್ನು ನೋಡುವುದಕ್ಕೂ ಅಭಿಮಾನಿಗಳು ಬಂದಿದ್ದರು.

‘4 ದಿನಗಳ ಪಂದ್ಯದಲ್ಲಿ 2ನೇ ದಿನವಾದ ಸೋಮವಾರ ಕರ್ನಾಟಕ ತಂಡ ಬ್ಯಾಟಿಂಗ್ ಮುಂದುವರಿಸಲಿದೆ. ಈ ಭಾಗದಲ್ಲಿ ಕ್ರಿಕೆಟ್ ಬೆಳೆಯಬೇಕು ಎನ್ನುವ ಉದ್ದೇಶದಿಂದ ಪಂದ್ಯಗಳನ್ನು ಆಯೋಜಿಸುತ್ತಿದ್ದೇವೆ. ಪಂದ್ಯ ವೀಕ್ಷಿಸಲೆಂದು ಪೆಂಡಾಲ್‌ ವ್ಯವಸ್ಥೆ ಮಾಡಿದ್ದೇವೆ. ವಿದ್ಯಾರ್ಥಿಗಳು ಹಾಗೂ ಕ್ರಿಕೆಟ್‌ ಅಭಿಮಾನಿಗಳು ಬಂದು ಆಟವನ್ನು ನೋಡಬೇಕು’ ಎಂದು ನಿಮಂತ್ರಕ ಅವಿನಾಶ ಪೋತದಾರ ಕೋರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು