ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಕ್ಷೀಣ; ಜಲಾಶಯಗಳು ಬರಿದು!

Last Updated 5 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಮುಂಗಾರು ಕ್ಷೀಣಿಸಿದ್ದರ ಪರಿಣಾಮವಾಗಿ ಜಿಲ್ಲೆಯ ಪ್ರಮುಖ ಜಲಮೂಲಗಳಾದ ನವಿಲುತೀರ್ಥ ಜಲಾಶಯ ಹಾಗೂ ಹಿಡಕಲ್‌ ಜಲಾಶಯಗಳಿಗೆ ಹರಿದುಬರುತ್ತಿದ್ದ ನೀರಿನ ಒಳ ಹರಿವು ತೀವ್ರ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ತಳಮಟ್ಟಕ್ಕೆ ತಲುಪಿದೆ.

ಮುಂಗಾರು ಪ್ರಾರಂಭವಾಗಿ ತಿಂಗಳು ಕಳೆದರೂ ಮಳೆ ಇನ್ನೂ ರಭಸವಾಗಿ ಸುರಿಯುತ್ತಿಲ್ಲ. ಮಲಪ್ರಭಾ ನದಿಯ ಉಗಮಸ್ಥಳವಾಗಿರುವ ಕಣಕುಂಬಿ ಹಾಗೂ ಖಾನಾಪುರ ಸುತ್ತಮುತ್ತಲು ಮಾತ್ರ ಕಳೆದ ನಾಲ್ಕೈದು ದಿನಗಳಲ್ಲಿ ಮಳೆ ರಭಸವಾಗಿ ಸುರಿದಿದೆ. ಈ ನೀರು ಇನ್ನೂ ನವಿಲುತೀರ್ಥ ಜಲಾಶಯಕ್ಕೆ ತಲುಪಿಲ್ಲ.

ಸವದತ್ತಿಯ ಬಳಿ ಮಲಪ್ರಭಾ ನದಿಗೆ ಕಟ್ಟಲಾಗಿರುವ ನವಿಲುತೀರ್ಥ ಜಲಾಶಯದಲ್ಲಿ 37 ಟಿ.ಎಂ.ಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯವಿದೆ. ಆದರೆ, ಶುಕ್ರವಾರ ಕೇವಲ 3.9 ಟಿಎಂಸಿ ಅಡಿಗಳಷ್ಟು ನೀರು ಮಾತ್ರ ಇತ್ತು. ಇದರಲ್ಲಿ ಕೇವಲ ಅರ್ಧ ಟಿಎಂಸಿ ಅಡಿ ನೀರು ಮಾತ್ರ ಉಪಯೋಗಕ್ಕೆ ಲಭ್ಯವಿದೆ. 2079.50 ಅಡಿ ಎತ್ತರದ ಜಲಾಶಯದಲ್ಲಿ 2034.10 ಅಡಿಗಳವರೆಗೆ ನೀರು ತಲುಪಿದೆ. ಒಳಹರಿವು ಇಲ್ಲ.

ಕಳೆದ ವರ್ಷ ಇದೇ ದಿನದಂದು 2042.05 ಅಡಿಗಳವರೆಗೆ ನೀರು ಸಂಗ್ರಹವಿತ್ತು. 2.9 ಟಿಎಂಸಿ ಅಡಿಗಳಷ್ಟು ನೀರು ಲಭ್ಯವಿತ್ತು. 138 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಮುಂಗಾರು ಪ್ರಾರಂಭವಾದ ನಂತರ ಇದುವರೆಗೆ ಜಲಾಶಯಕ್ಕೆ ನೀರು ಹರಿದುಬಂದಿಲ್ಲ. ಜೂನ್‌ 1ರಂದು ಇದ್ದಷ್ಟು ನೀರು ಉಳಿದಿಲ್ಲ.

ಹಿಡಕಲ್‌ದಲ್ಲೂ ಕೊರತೆ:

ಹುಕ್ಕೇರಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಗೆ ಕಟ್ಟಲಾಗಿರುವ ಹಿಡಕಲ್‌ ಜಲಾಶಯದಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದೆ. 51 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಈಗ ಕೇವಲ 5 ಟಿಎಂಸಿ ಅಡಿ ನೀರಿದೆ. ಇದರಲ್ಲಿ 3.59 ಟಿಎಂಸಿ ಅಡಿ ನೀರು ಮಾತ್ರ ಉಪಯೋಗಕ್ಕೆ ಲಭ್ಯವಿದೆ. 2175 ಅಡಿಗಳಷ್ಟು ಎತ್ತರವಿರುವ ಜಲಾಶಯದಲ್ಲಿ 2085.16 ಅಡಿಯವರೆಗೆ ನೀರು ಸಂಗ್ರಹವಾಗಿದೆ.

ಈಗಷ್ಟೇ ಹಿಡಕಲ್‌ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 16,594 ಕ್ಯುಸೆಕ್‌ ನೀರು ಹರಿದುಬಂದಿದೆ. ಜೂನ್‌ 1ರಿಂದ ಇಲ್ಲಿಯವರೆಗೆ ಜಲಾಶಯಕ್ಕೆ ಕೇವಲ 1 ಟಿಎಂಸಿ ಅಡಿಗಳಷ್ಟು ನೀರು ಹರಿದುಬಂದಿದೆ.

ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 8.37 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಸುಮಾರು 5 ಟಿಎಂಸಿ ಅಡಿಗಳಷ್ಟು ನೀರು ಕಡಿಮೆಯಾಗಿದೆ.

ಕೃಷ್ಣೆಗೆ ಹರಿಸಲಾಗಿತ್ತು:

ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿಹೋಗಿದ್ದರಿಂದ ಅಥಣಿ, ರಾಯಬಾಗ, ಚಿಕ್ಕೋಡಿ ಜನರು ನೀರಿಲ್ಲದೇ ತೀವ್ರ ತೊಂದರೆ ಅನುಭವಿಸಿದ್ದರು. ಅವರ ಸಲುವಾಗಿ ಹಿಡಕಲ್‌ ಜಲಾಶಯದಿಂದ ನೀರು ಹರಿಸಲಾಗಿತ್ತು. ಹೀಗಾಗಿ ಅಣೆಕಟ್ಟೆಯಲ್ಲಿನ ನೀರು ಹರಿದುಹೋಗಿತ್ತು. ಈಗ ಸುರಿಯುವ ಮಳೆಯ ಮೇಲೆಯೇ ಅವಲಂಬನೆಯಾಗಿದೆ.

ಬಿತ್ತನೆಗೆ ಹಿನ್ನಡೆ:

‘ಮಳೆ ಕಡಿಮೆಯಾಗಿರುವುದರಿಂದ ಹಾಗೂ ನದಿಗಳ ಜಲಾನಯನ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದೆ. ಈಗಾಗಲೇ ಮಳೆ ವಿಳಂಬವಾಗಿದ್ದು, ವಾರದಲ್ಲಿ ಮಳೆಯಾಗದಿದ್ದರೆ ಇನ್ನೂ ಕಷ್ಟವಾಗಲಿದೆ’ ಎಂದು ರೈತ ಮುಖಂಡ ಸಿದಗೌಡ ಮೋದಗಿ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT