ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಕಾರ ತೋರುವ ಖಾಸಗಿ ಆಸ್ಪತ್ರೆ ಪರವಾನಗಿ ರದ್ದು: ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ

Last Updated 15 ಅಕ್ಟೋಬರ್ 2018, 13:12 IST
ಅಕ್ಷರ ಗಾತ್ರ

ಬೆಳಗಾವಿ: ಇಂದ್ರಧನುಷ್ ಅಭಿಯಾನ ಸೇರಿದಂತೆ ಯಾವುದೇ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಸಹಕಾರ ತೋರುವ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

‘3ನೇ ಸುತ್ತಿನ ಮುಂದುವರಿದ ಗ್ರಾಮ ಸ್ವರಾಜ್ ಅಭಿಯಾನ’ದಡಿ ನಡೆಯುತ್ತಿರುವ ಇಂದ್ರಧನುಷ್ ಅಭಿಯಾನ ಕುರಿತು ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸದೃಢ ಮಗುವಿನಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನುವುದನ್ನು ಮನಗಂಡಿರುವ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇವುಗಳಿಗೆ ಎಲ್ಲ ಖಾಸಗಿ ಆಸ್ಪತ್ರೆಯವರೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.

‘ಅನುಷ್ಠಾನ, ಸಾಂಕ್ರಾಮಿಕ ರೋಗಗಳ ಹತೋಟಿಗೆ ಸ್ಥಳೀಯ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳ ಜೊತೆ ಸಂಪರ್ಕ ಹೊಂದಿರಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದಾಗ ಅಗತ್ಯ ಮಾಹಿತಿ ಒದಗಿಸುವ ಮೂಲಕ ಖಾಸಗಿ ಆಸ್ಪತ್ರೆಗಳವರು ಸಹಕರಿಸಬೇಕು’ ಎಂದು ಹೇಳಿದರು.

ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ:

‘ನಕಲಿ ವೈದ್ಯರು ಕಂಡುಬಂದರೆ ಯಾವುದೇ ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಈಗಾಗಲೇ ಎಸ್ಪಿ ಜೊತೆ ಚರ್ಚೆ ನಡೆಸಲಾಗಿದೆ’ ಎಂದರು.

‘ಇಂದ್ರಧನುಷ್ ಲಸಿಕೆ ಅಭಿಯಾನ ಅ. 20ರವರೆಗೆ ನಡೆಯಲಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಸಂಪೂರ್ಣ ಗುರಿ ಸಾಧಿಸಬೇಕು. ಲಸಿಕೆಯಿಂದ ವಂಚಿತಗೊಂಡಿರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವ ಅಭಿಯಾನವಿದು. 2 ವರ್ಷ ವಯಸ್ಸಿನೊಳಗಿನವರು, 5ರಿಂದ 6 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2 ವರ್ಷದೊಳಗಿನ 9,685, 5ರಿಂದ 6 ವರ್ಷದೊಳಗಿನ 3,012 ಮಕ್ಕಳು ಮತ್ತು 1,538 ಗರ್ಭಿಣಿಯರಿಗೆ 813 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು’ ಎಂದು ವಿವರಿಸಿದರು.

ಡಿಎಚ್‌ಒ ಡಾ.ಅಪ್ಪಾಸಾಬ ನರಟ್ಟಿ, ಎಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಆರ್‌ಸಿಎಚ್ ಡಾ.ಐಪಿ. ಗಡಾದ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಿ.ಎಸ್. ಹವಾಲ್ದಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶೈಲಜಾ ತಮ್ಮಣ್ಣವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರವೀಣ ಬಾಗೇವಾಡಿ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT