ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾನಗರಿಯಲ್ಲಿ ದೀಪಾವಳಿ: ಮನೆಗಳ ಎದುರು ಕೋಟೆ, ಎಮ್ಮೆ, ಕೋಣೆಗಳ ಪ್ರದರ್ಶನ

ಆಚರಣೆಯ ವಿಶೇಷ
Last Updated 12 ನವೆಂಬರ್ 2020, 7:11 IST
ಅಕ್ಷರ ಗಾತ್ರ

ಬೆಳಗಾವಿ: ಮನೆಗಳ ಮುಂದೆ ‘ಕೋಟೆ’ಗಳ ಮಾದರಿ ಕಟ್ಟಿ ಪ್ರದರ್ಶಿಸುವುದು. ಎಮ್ಮೆಗಳು ಮತ್ತು ಕೋಣಗಳನ್ನು ಅಲಂಕರಿಸಿ ಮೆರವಣಿಗೆ ಮಾಡುವುದು. ಕುರಿ ಬೆದರಿಸಿ ಓಡಿಸುವುದು. ಸಗಣಿಯಿಂದ ಸಿದ್ಧಪಡಿಸಿದ ‘ಹಟ್ಟೆವ್ವ’ ಮೂರ್ತಿಗಳನ್ನು ಪೂಜಿಸುವುದು. ವೈವಿಧ್ಯಮಯ ಆಕಾಶ ಬುಟ್ಟಿಗಳ ಮೆರುಗು... ಜಿಲ್ಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ನಡೆದುಕೊಂಡು ಬಂದಿರುವ ವಿಶೇಷ ಆಚರಣೆಗಳಿವು.

ಮೈಸೂರು ಭಾಗದಲ್ಲಿ ಮಕರ ಸಂಕ್ರಾಂತಿಯಂದು ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಸಂಪ್ರದಾಯವಿದೆ. ಆದರೆ, ಕುಂದಾನಗರಿಯಲ್ಲಿ ಬೆಳಕಿನ ಹಬ್ಬದಲ್ಲಿ ಅದರಲ್ಲೂ ವಿಶೇಷವಾಗಿ ಬಲಿಪಾಡ್ಯಮಿಯಂದು ಎಮ್ಮೆಗಳ ಮೆರವಣಿಗೆಯನ್ನು ‘ಫ್ಯಾಷನ್‌ ಷೋ’ ರೀತಿಯಲ್ಲಿ ನಡೆಸುವುದು ಗಮನಸೆಳೆಯುತ್ತದೆ.

ಕಡುಕಪ್ಪು ಮೈಬಣ್ಣದ, ನೀಳಕಾಯದ, ಮಾರುದ್ದದ ಕೊಂಬುಗಳನ್ನು ಹೊಂದಿರುವ ಎಮ್ಮೆಗಳ ಮೆರವಣಿಗೆ ನೋಡುವುದೇ ಒಂದು ಸೊಗಸು. ಗೌಳಿಗರು ಅಂದು ಅವುಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಅವುಗಳ ಮೆರವಣಿಗೆ ನಡೆಸಿ ಸಂಭ್ರಮಿಸುತ್ತಾರೆ. ಎಲ್ಲರೂ ಸೇರಿ ಎಮ್ಮೆ, ಕೋಣಗಳ ಸ್ಪರ್ಧೆ ಆಯೋಜಿಸಿ, ತಮಗೆ ಬದುಕು ನೀಡುವ ರಾಸುಗಳನ್ನು ಹೆಚ್ಚಿನ ಧನ್ಯತೆಯಿಂದ ಕಾಣುತ್ತಾರೆ.

ಮೈದಾನದಲ್ಲಿ ಸಮಾವೇಶ:

ಕಾಲುಗಳಿಗೆ ಕಟ್ಟುವ ಗೆಜ್ಜೆಗಳ ಗಿಲಕ್, ಗಿಲಕ್ ಶಬ್ದವು ಎಮ್ಮೆಗಳು ವೇಗವಾಗಿ ಓಡಿದಂತೆಲ್ಲಾ ಹೆಚ್ಚಾಗುತ್ತದೆ. ಗಲ್ಲಿಗಳಿಗೆ ಮೆರುಗು ನೀಡುತ್ತದೆ. ಕೆಲ ಯುವಕರು ಬೈಕ್‌ನ ಸೈಲೆನ್ಸರ್‌ ತೆಗೆದು ‘ಕರ್ಕಶ’ ಶಬ್ದ ಮಾಡುತ್ತಾ ಅವುಗಳನ್ನು ಓಡಿಸುತ್ತಾರೆ. ಆ ಭಾಗದ ಮೈದಾನದಲ್ಲಿ ಮೆರವಣಿಗೆ ಸಮಾವೇಶಗೊಳ್ಳುತ್ತದೆ.

‘ಹೈನುಗಾರಿಕೆ ಮೂಲಕ ತಮ್ಮ ಜೀವನಕ್ಕೆ ನೆರವಾಗುವ ಎಮ್ಮೆಗಳನ್ನು ಖುಷಿಪಡಿಸಿದರೆ; ಗೌರವ ತೋರಿದರೆ ನಮಗೆ ಒಳ್ಳೆಯದಾಗುತ್ತದೆ ಮತ್ತು ಲಾಭವಾಗುತ್ತದೆ’ ಎನ್ನುವುದು ಗೌಳಿಗರ ನಂಬಿಕೆ.

ಕೋಟಿ ಕಟ್ಟಿ ಮಕ್ಕಳ ಸಂಭ್ರಮ:

ಜಿಲ್ಲೆಯ ಬಹುತೇಕ ಕಡೆಗಳಲ್ಲಿ, ವಿಶೇಷವಾಗಿ ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಬೆಳಕಿನ ಹಬ್ಬಕ್ಕೆ ‘ಕೋಟೆ’ ಮಾದರಿಗಳನ್ನು ಕಟ್ಟುವ ಹಾಗೂ ಪ್ರದರ್ಶಿಸುವ ಆಚರಣೆ ವಿಶೇಷವಾಗಿದೆ. ಇದರಲ್ಲಿ ಆ ಬಡಾವಣೆಯ ಮಕ್ಕಳೇ ತಮ್ಮ ಕೌಶಲ ಪ್ರದರ್ಶಿಸುವುದು ವಿಶೇಷ.

ಛತ್ರಪತಿ ಶಿವಾಜಿ ಮಹಾರಾಜ ಮೊಗಲ್ ಸಾಮ್ರಾಜ್ಯದ ವಿರುದ್ಧ ವಿಜಯ ಸಾಧಿಸಿದ ಸವಿನೆನಪಿಗಾಗಿ ಶಿವಾಜಿ ಭಕ್ತರು ಮತ್ತು ಅನುಯಾಯಿಗಳು ದೀಪಾವಳಿಯಿಂದ ತುಳಸಿ ವಿವಾಹದವರೆಗೆ ಈ ಆಚರಣೆ ಮಾಡುತ್ತಾರೆ. ಶಿವಾಜಿ ನಿರ್ಮಿಸಿದ ವಿವಿಧ ಕೋಟೆಗಳ ಮಾದರಿ ನಿರ್ಮಿಸಿ ಪ್ರದರ್ಶಿಸುತ್ತಾರೆ. ಶಿವಾಜಿ ಹಾಗೂ ಅವರ ಕಾಲದ ರಾಜ ಮಹಾರಾಜರ ಸಾಹಸ, ಧೈರ್ಯ, ದೇಶಭಕ್ತಿ ಮತ್ತು ಧ್ಯೇಯಗಳ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಇದರದು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದರ್ಶನ ಸ್ಪರ್ಧೆಯಾಗಿಯೂ ಮಾರ್ಪಾಡಾಗಿದೆ. ಆಯಾ ಪ್ರದೇಶದ ಮುಖಂಡರು ಮತ್ತು ಸಂಘ ಸಂಸ್ಥೆಗಳವರು ಉತ್ತಮ ವಿನ್ಯಾಸ ಮತ್ತು ಅಲಂಕಾರ ಹೊಂದಿದ ಕೋಟೆ ನಿರ್ಮಿಸಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ.

ಮಕ್ಕಳು ಮತ್ತು ಯುವಕರು ತರಹೇವಾರಿ ಕೋಟೆಗಳ ಮಾದರಿ ನಿರ್ಮಿಸಿ ಪ್ರದರ್ಶನಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸುತ್ತಾರೆ. ಮನೆ, ವ್ಯಾಯಾಮ ಶಾಲೆ, ಕುದುರೆ ಲಾಯ, ದೇವಸ್ಥಾನ, ರಾಜನ ಆಸ್ಥಾನಗಳನ್ನು ತಯಾರಿಸಿ ಅವುಗಳಲ್ಲಿ ಪುಟ್ಟ ಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ವಿದ್ಯುತ್‌ ದೀಪಾಲಂಕಾರದಿಂದ ಗಮನಸೆಳೆಯುತ್ತವೆ. ಇದಕ್ಕೆ ಸ್ಥಳೀಯರು ಆರ್ಥಿಕವಾಗಿ ಕೈಜೋಡಿಸುತ್ತಾರೆ.

ಕುರಿಗಾಹಿಗಳಲ್ಲಿ...

ಕುರಿಗಾಹಿಗಳು ಕುರಿ ಬೆದರಿಸಿ ಓಡಿಸುವ ವಿಶೇಷ ಆಚರಣೆ ಮೂಲಕ ಸಂಭ್ರಮಿಸುತ್ತಾರೆ. ಸರದಿಯಂತೆ ಕುರಿಗಾಹಿ ಕುಟುಂಬದವರು ತಮ್ಮ ಕುರಿ, ಟಗರುಗಳನ್ನು ಓಡಿಸುತ್ತಾರೆ. ಗಂಗಾಳುವನ್ನು (ಹಿತ್ತಾಳೆ ತಾಟು) ಡಣ್, ಡಣ್ ಎಂದು ಜೋರಾಗಿ ಬಾರಿಸಿ ಬೆದರಿಸುತ್ತಿದ್ದಂತೆಯೇ ಕುರಿಗಳು ಜಿಗಿದು ಓಡುತ್ತವೆ.

ಅವುಗಳ ಓಟ ನೋಡಲು ರಸ್ತೆಬದಿಯಲ್ಲಿ ಜನರು ನೆರೆದಿರುತ್ತಾರೆ. ಕುರಿಗಳು ನೆಗೆದಾಗ, ವೇಗವಾಗಿ ಓಡಿದಾಗ ಅದು ಸಮೃದ್ಧಿಯ, ಪ್ರಗತಿಯ ಮತ್ತು ವಿಜಯದ ಸಂಕೇತ ಎನ್ನುವುದು ಅವರ ನಂಬಿಕೆ. ಓಡಿಸುವ ಮುಂಚೆ ಜೋಳದ ದಂಟು, ಕಬ್ಬು, ಅವರೆಗಿಡ ಸೇರಿಸಿ ಗುಡಿಸಲಿನಂತೆ ಕಟ್ಟಿ, ಅದರಲ್ಲಿ ಸಗಣಿಯಿಂದ ಸಿದ್ಧಪಡಿಸಿದ ಪಾಂಡವರನ್ನು ಇಟ್ಟು, ಜಗದ್ಗರು ಸಿದ್ಧಾರೂಢ ಆರಾಧ್ಯರನ್ನು ಪೂಜಿಸುತ್ತಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಮನೆಗಳಲ್ಲಿ ದೀಪಾವಳಿಯನ್ನು ‘ಹಟ್ಟೆವ್ವನ ಹಬ್ಬ’ವಾಗಿ ಆಚರಿಸುತ್ತಾರೆ. ಸಗಣಿಯ ಮೂರ್ತಿಗಳಿಗೆ ‘ಹಟ್ಟೆವ್ವ’ ಅಥವಾ ‘ಪಾಂಡವರು’ ಎಂದು ಕರೆದು, ಪಡಸಾಲೆಯಲ್ಲಿ ಇಟ್ಟು ಪೂಜಿಸುತ್ತಾರೆ.

(ಪೂರಕ ಮಾಹಿತಿ: ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ಬಾಲಶೇಖರ ಬಂದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT