ಸೋಮವಾರ, ಆಗಸ್ಟ್ 15, 2022
24 °C
ಎರಡೂ ಪರೀಕ್ಷೆಗೆ ಹಾಜರಾಗಲು ಅನುಕೂಲ ಕಲ್ಪಿಸುವಂತೆ ಆಗ್ರಹ

ಪದವಿ ಮತ್ತು ಪೊಲೀಸ್ ಇಲಾಖೆ ಪರೀಕ್ಷೆ ಒಂದೇ ದಿನ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಾಗರಿಕ ಪೊಲೀಸ್‌ ಹುದ್ದೆ ಹಾಗೂ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ದ ಪರೀಕ್ಷೆ ಒಂದೇ ದಿನ ಅಂದರೆ ಸೆ.20ರಂದು  ಬಂದಿರುವುದರಿಂದ, ಎರಡೂ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಒಂದು ಪರೀಕ್ಷೆಗೆ ಮಾತ್ರ ಹಾಜರಾಗಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.

ಆರ್‌ಸಿಯು ಪರೀಕ್ಷೆಗಳು ಏಪ್ರಿಲ್‌ನಲ್ಲೇ ನಡೆಯಬೇಕಾಗಿತ್ತು. ಆದರೆ, ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ  ಜಾರಿಗೊಳಿಸಲಾದ ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿತ್ತು. ಇದೇ ತಿಂಗಳ 30ರ ಒಳಗೆ ಪರೀಕ್ಷೆಗಳನ್ನು ಮುಗಿಸುವಂತೆ ಯುಜಿಸಿ ಆದೇಶಿಸಿದೆ.

ಈ ನಡುವೆ, ದ್ವಿತೀಯ ‍ಪಿಯುಸಿ ವಿದ್ಯಾರ್ಹತೆ ಆಧಾರದ ಮೇಲೆ ಕಾನ್‌ಸ್ಟೆಬಲ್‌ ಹುದ್ದೆಗೆ ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳಿಗೆ ತೊಡಕಾಗಿದೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯದಲ್ಲಿ 45ಸಾವಿರಕ್ಕೂ ಹೆಚ್ಚಿನ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಯ ಪರೀಕ್ಷೆಗೂ ಅರ್ಜಿ ಸಲ್ಲಿಸಿದ್ದಾರೆ.

ಮೇನಲ್ಲೇ ಪ್ರಕಟ: ಸಿವಿಲ್‌ ಪೊಲೀಸ್‌ (ಪುರುಷ ಮತ್ತು ಮಹಿಳೆ) ಹುದ್ದೆಗಳನ್ನು ಭರ್ತಿ ಮಾಡಲು ಮೇನಲ್ಲಿ ಕರ್ನಾಟಕ ಪೊಲೀಸ್‌ ರಿಕ್ರೂಟ್‌ಮೆಂಟ್‌ ವಿಭಾಗವು ಅಧಿಸೂಚನೆ ಹೊರಡಿಸಿತ್ತು. ಸೆ.20ಕ್ಕೆ (ಭಾನುವಾರ) ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ದಿನಾಂಕ ನಿಗದಿ ಮಾಡಲಾಗಿತ್ತು. ಆರ್‌ಸಿಯು ಪರೀಕ್ಷೆಯ ವೇಳಾಪಟ್ಟಿಯನ್ನು ಹೋದ ತಿಂಗಳು ಪ್ರಕಟಿಸಲಾಗಿದೆ. ಸೆ. 26ರವರೆಗೆ ಪರೀಕ್ಷೆ ಇದೆ.

‘ಎರಡೂ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವುದು ನಮಗೆ ತೊಂದರೆಯಾಗಿ ಪರಿಣಮಿಸಿದೆ. ಒಂದು ಪರೀಕ್ಷೆ ಬರೆದರೆ ಇನ್ನೊಂದರ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ. ಪದವಿಯ ಭವಿಷ್ಯ ನೋಡುವುದೋ, ಉದ್ಯೋಗದ ಅವಕಾಶ ಕಂಡುಕೊಳ್ಳುವುದೋ ತಿಳಿಯದೆ ಗೊಂದಲಕ್ಕೆ ಸಿಲುಕಿದ್ದೇವೆ. ಎರಡರಲ್ಲಿ ಒಂದು ಪರೀಕ್ಷೆ ಮುಂದೂಡಿದರೆ ನನ್ನಂತಹ ಸಾವಿರಾರು ಮಂದಿಗೆ ಅನುಕೂಲವಾಗುತ್ತದೆ’ ಎಂದು ವಿಜಯಪುರದ ಬಸವೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿ ಬಂದೇನವಾಜ್‌ ನದಾಫ್‌ ಆಗ್ರಹಿಸಿದರು.

‘ಹೋದ ವರ್ಷವೂ ಇದೇ ರೀತಿಯಾಗಿತ್ತು. ಆಗಲೂ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಯ ಲಿಖಿತ ಪರೀಕ್ಷೆಯ ಅವಕಾಶ ತಪ್ಪಿತು. ಈ ಬಾರಿಯೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಈ ಬಗ್ಗೆ ತಿಳಿಸಲು ವಿಶ್ವವಿದ್ಯಾಲಯಕ್ಕೆ ಕರೆ ಮಾಡಿದರೆ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು