ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವರ ಕ್ಷೇತ್ರದಲ್ಲೇ ಇಲ್ಲ ಕೃಷಿ ಅಧಿಕಾರಿ

40 ಹಳ್ಳಿಗಳನ್ನು ಒಳಗೊಂಡ ಯಮಕನಮರಡಿ ರೈತ ಸಂಪರ್ಕ ಕೇಂದ್ರ ಖಾಲಿಖಾಲಿ, ರೈತರಿಗೆ ತಪ್ಪದ ಪರದಾಟ
Published 18 ಜನವರಿ 2024, 14:22 IST
Last Updated 18 ಜನವರಿ 2024, 14:22 IST
ಅಕ್ಷರ ಗಾತ್ರ

ಯಮಕನಮರಡಿ: ಯಮಕನಮರಡಿ ರೈತ ಸಂಪರ್ಕ ಕೇಂದ್ರದಲ್ಲಿ ಒಂದೂವರೆ ವರ್ಷದಿಂದ ಕೃಷಿ ಅಧಿಕಾರಿ, ಸಿಬ್ಬಂದಿಯೇ ಇಲ್ಲ. ಇದರಿಂದ ಗ್ರಾಮೀಣ ರೈತರಿಗೆ ದೊರಕಬೇಕಾದ ಕೃಷಿ ಸಲಕರಣೆಗಳು, ಕಾಲಕಾಲಕ್ಕೆ ಸಿಗಬೇಕಾದ ಮಾಹಿತಿ ಸಿಗುತ್ತಿಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಜನ ಬೇರೆಬೇರೆ ಕಡೆ ಅಲೆಯುವಂತಾಗಿದೆ.

ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರು ಪ್ರತಿನಿಧಿಸಿದ ಯಮಕನಮರಡಿಯಲ್ಲೇ ರೈತರಿಗೆ ಸಂಕಷ್ಟ ತಪ್ಪಿಲ್ಲ. ಈ ವಿಚಾರವಾಗಿ ಸಚಿವರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ ಎನ್ನುವುದು ರೈತರ ಗೋಳು.

ಹುಕ್ಕೇರಿ ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಯಮಕನಮರಡಿಯೇ ದೊಡ್ಡದು. 13,906 ಹೆಕ್ಟೇರ್‌ ಕೃಷಿ ಪ್ರದೇಶವಿದ್ದು, ನೀರಾವರಿಯೂ ಹೆಚ್ಚಾಗಿದೆ. ಈ ಭಾಗದಲ್ಲಿ ಕಬ್ಬು ಮುಖ್ಯ ಬೆಳೆಯಾಗಿದೆ. ಇಷ್ಟೆಲ್ಲ ಜಮೀನಿಗೆ ಒಬ್ಬ ಕೃಷಿ ಅಧಿಕಾರಿ, ಸಹಾಯಕ ಕೃಷಿ ಸಿಬ್ಬಂದಿ ಇಲ್ಲದಿರುವುದು ದುರದೃಷ್ಟ ಎಂದು ರೈತರ ದೂರಿದ್ದಾರೆ.

ಈ ರೈತ ಸಂಪರ್ಕ ಕೇಂದ್ರಕ್ಕೆ ಯಮಕನಮರಡಿ, ಹತ್ತರಗಿ, ಮಣಗುತ್ತಿ, ನಾಗನೂರ ಕೆ.ಡಿ., ಕೋಟ, ಸಲಾಮವಾಡಿ, ದಡ್ಡಿ, ಇಸ್ಲಾಂಪೂರ, ಶಹಾಬಂದರ, ಪಾಶ್ಚಾಪೂರ, ರುಸ್ತುಪೂರ, ಮಾವನೂರ, ಕರಗುಪ್ಪಿ 14 ಪಂಚಾಯಿತಿಗಳು ಹಾಗೂ 40 ಗ್ರಾಮಗಳು ಬರುತ್ತವೆ. ಅದರಲ್ಲಿ ಅತಿ ಸಣ್ಣ ರೈತರು 10,500, ದೊಡ್ಡ ರೈತರು 1,700 ಇದ್ದಾರೆ. ಈ ಭಾಗದಲ್ಲಿ ಸೋಯಾಬೀನ್, ಹತ್ತಿ, ಜೋಳ, ಗೋವಿನ ಜೋಳ, ಕಬ್ಬು, ಭತ್ತ, ಶೇಂಗಾ ಬೆಳೆಯುತ್ತಾರೆ.

ಈ ಮೊದಲು 14 ಪಂಚಾಯಿತಿ ಒಳಗೊಂಡು ಕ್ಷೇತ್ರದಲ್ಲಿ ಮೂವರು ಕೃಷಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಈಗ ಮೂರೂ ಹುದ್ದೆಗಳು ಖಾಲಿ ಇವೆ ಎಂದು ಹತ್ತರಗಿ, ಯಮಕನಮರಡಿ ರೈತರು ದೂರಿದ್ದಾರೆ.

ಎರಡು ಅಂತಸ್ತಿನ ಹೊಸ ಕಟ್ಟಡ ಇದೆ. ಆದರೆ, ಕುಡಿಯುವ ನೀರು ಸೇರಿ ಮೂಲಸೌಕರ್ಯಗಳು ಇಲ್ಲ. ಇಂತಹ ಅನೇಕ ಸಮಸ್ಯೆಗಳು ಇಲ್ಲಿ ತಾಂಡವವಾಡುತ್ತಿವೆ. ಇದರ ಬಗ್ಗೆ ಜನಪ್ರತಿನಿಧಿಗಳು ಕೇಳಿಯೂ ಕೇಳದಂತೆ ಮೌನವಾಗಿದ್ದಾರೆ ಎಂಬುದು ರೈತರ ಆರೋಪ.

‘ರೈತ ಸಂಪರ್ಕ ಕೇಂದ್ರಕ್ಕೆ ಅಧಿಕಾರಿಗಳು ಇಲ್ಲದಿದ್ದರೆ ಕೃಷಿ ಇಲಾಖೆಯ ಹೊಸ ಯೋಜನೆಗಳ ಮಾಹಿತಿ ಯಾರು ನೀಡುವರು. ಇಲ್ಲಿ ಹಂಗಾಮಿ ಅಧಿಕಾರಿಗಳು ಬೇಡ ಕಾಯಂ ಸಿಬ್ಬಂದಿ ನೀಡಬೇಕು’ ಎನ್ನುತ್ತಾರೆ ಕೆಂಪಣ್ಣ ಬಿಸಿರೊಟ್ಟಿ.

ಹುಕ್ಕೇರಿ ತಾಲ್ಲೂಕಿನಲ್ಲಿ 23 ಸಹಾಯಕ ಕೃಷಿ ಅಧಿಕಾರಿ ಹುದ್ದೆ ಖಾಲಿ ಇವೆ. ಯಮಕನಮರಡಿ ಕೃಷಿ ಅಧಿಕಾರಿ ಹುದ್ದೆಗೆ ವರ್ಗವಾಗಿ ಬರಬೇಕು. ಮೇಲಧಿಕಾರಿಗೆ ಮಾಹಿತಿ ನೀಡಿದ್ದೇನೆ
ಆರ್.ಬಿ.ನಾಯ್ಕರ ಸಹಾಯಕ ಕೃಷಿ ನಿರ್ದೇಶಕ ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT