ಮಂಗಳವಾರ, ಸೆಪ್ಟೆಂಬರ್ 21, 2021
29 °C

ಆಲಮಟ್ಟಿಯಿಂದ ಹೆಚ್ಚು ನೀರು ಹರಿಬಿಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ (ಬೆಳಗಾವಿ ಜಿಲ್ಲೆ): ‘ಪ್ರತಿ ವರ್ಷ ಪ್ರವಾಹ ಬಂದು ನಮ್ಮ ಬದುಕು ಮೂರಾಬಟ್ಟೆ ಆಗುತ್ತಿದೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ. ಪ್ರವಾಹ ಹೆಚ್ಚಾಗಲು ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹ ಮಾಡಿದ್ದೇ ಕಾರಣವಾಗಿದೆ. ಅದರ ಹಿನ್ನೀರಿನಿಂದ ಹಿಪ್ಪರಗಿ ಜಲಾಶಯದ ನೀರು ಕಡಿಮೆಯಾಗಿಲ್ಲ. ಆಲಮಟ್ಟಿ ಜಲಾಶಯದಿಂದ ಜಾಸ್ತಿ ಪ್ರಮಾಣದ ನೀರು ಹರಿಬಿಡುವಂತೆ ಕ್ರಮ ವಹಿಸಬೇಕು’ ಎಂದು ಸಂತ್ರಸ್ತರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಲ್ಲಿ ಮನವಿ ಮಾಡಿದರು.

ಸಮೀಪದ ಸತ್ತಿ ಹಾಗೂ ಝೀರೋಪಾಯಿಂಟ್‌ನಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿದ ವೇಳೆ ಸಮಸ್ಯೆಗಳನ್ನು ಹೇಳಿಕೊಂಡರು.

‘ಆಲಮಟ್ಟಿ ಜಲಾಶಯದ ವ್ಯಾಪ್ತಿ ಸವದಿ-ದರ್ಗಾವರೆಗೂ ಮಾತ್ರ ಇದೆ. ಆ ಆಣೆಕಟ್ಟೆಯ ನೀರು ವ್ಯಾಪ್ತಿ ಮೀರಿ ಸಂಗ್ರವಾಗುತ್ತಿದೆ. ಅವರು ನಮಗೆ ಯಾವುದೇ ಪರಿಹಾರ ನೀಡಿಲ್ಲ. ನಮಗೆ ಪ್ರತಿ ವರ್ಷ ತೊಂದರೆ ಆಗುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗಿವೆ. ಸಾಲ ಮಾಡಿ ಹಣ ತಂದು ಕಬ್ಬು, ಬಾಳೆ, ಉದ್ದು ಕೃಷಿ ಮಾಡಿದ್ದೆವು. ಫಲವತ್ತಾಗಿ ಬೆಳೆ ಬಂದಿತ್ತು. ಪ್ರವಾಹದ ಹೊಡೆತದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಅಳಲು ತೋಡಿಕೊಂಡರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಯಾರೂ ಭಯ ಆತಂಕ ಪಡಬೇಡಿ. ಎಲ್ಲ ಅಧಿಕಾರಿಗಳೂ ನಿಮಗೆ ಸ್ಪಂದನೆ ಮಾಡುತ್ತಿದ್ದಾರೆ. ಆಲಮಟ್ಟಿ ಜಲಾಶಯದಿಂದ ನೀರು ಹರಿ ಬಿಡಲು ಸಂಬಂಧಿಸಿದವರೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಕಾಳಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

‘ಅನೇಕ ವರ್ಷಗಳಿಂದ ನೂರಾರು ಕುಟುಂಬಗಳು ಸತ್ತಿ ಜನವಸತಿಯ ಕೃಷ್ಣಾ ನದಿ ದಂಡೆಯ ಕುರುಣ ಗಡ್ಡೆಯಲ್ಲಿ ವಾಸವಿದ್ದೇವೆ. ಅದು ಅರಣ್ಯ ಇಲಾಖೆ ಜಾಗವಾಗಿದೆ. ಆದ್ದರಿಂದ ನಮಗೆ ಅಲ್ಲಿ ವಾಸಕ್ಕೆ ತೊಂದರೆಯಾಗಿದೆ. ಪ್ರವಾಹ ಬಂದು ಹೋದ ಮೇಲೆ ನಮಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ. ನಮಗೆ ಶಾಶ್ವತ ಸೂರು ಒದಗಿಸಬೇಕು’ ಎಂದು ಜನರು ಕೋರಿದರು.

‘ಸತ್ತಿಯನ್ನು ಸಂಪೂರ್ಣ ಮುಳಗಡೆ ಗ್ರಾಮ’ ಎಂದು ಘೋಷಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್‌ಕುಮಾರ್‌, ತಾ.ಪಂ. ಇ.ಒ. ಶೇಖರ ಕರಿಬಸಪ್ಪನವರ, ಲೋಕೋಪಯೋಗಿ ಇಲಾಖೆಯ ಗೌಡಪ್ಪ ಗುಳಪ್ಪನವರ, ಎ.ಜಿ. ಮುಲ್ಲಾ, ಈರಣ್ಣ ವಾಲಿ, ಮುಖಂಡ ಬಿ.ಆರ್. ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ಭಜರಂಗಿ, ಪಿ.ಡಿ.ಒ. ಬಿ.ಎಸ್. ಹಿರೇಮಠ, ಪ್ರಕಾಶ ಭೂಷಣ್ಣವರ, ಜಡೆಪ್ಪ ಕುಂಬಾರ, ಮಲ್ಲಪ್ಪ ಹಂಚಿನಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು