₹ 10 ಸಾವಿರ ಪರಿಹಾರ ಧನಕ್ಕೆ ಆಗ್ರಹ: ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಪ್ರತಿಭಟನೆ

ಬೆಳಗಾವಿ: ‘ಕೋವಿಡ್ ಲಾಕ್‌ಡೌನ್ ಪರಿಹಾರ ಧನವಾಗಿ ತಲಾ ₹ 10ಸಾವಿರವನ್ನು ಸತತ ಮೂರು ತಿಂಗಳವರೆಗೆ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ, ಗಳಿಕೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರವು ಘೋಷಿಸಿರುವ ₹ 3ಸಾವಿರದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಬಹಳಷ್ಟು ಮಂದಿಗೆ ಈ ಪರಿಹಾರವೂ ಇದುವರೆಗೆ ಸಿಕ್ಕಿಲ್ಲ. ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಟ್ಟು ₹ 30ಸಾವಿರ ಕೊಡಬೇಕು’ ಎಂದು ಒತ್ತಾಯಿಸಿದರು.
ಕ್ಲೇಮ್ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ, ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು. ಎಲ್ಲ ಕಟ್ಟಡ ಕಾರ್ಮಿಕರಿಗೂ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್‌ಗಳನ್ನು ನೀಡಬೇಕು. ಕಿಟ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಬಂದಿರುವುದರಿಂದಾಗಿ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾ ಮುಖಂಡ ರಾಜು ಗಾಣಗಿ ಮಾತನಾಡಿ, ‘ಸರ್ಕಾರದಿಂದ ನೀಡಲಾಗುತ್ತಿರುವ ದಿನಸಿ ಕಿಟ್‌ಗಳನ್ನು ಶಾಸಕರು ಅವರ ಬೆಂಬಲಿಗರಿಗೆ ಮಾತ್ರ ನೀಡುತ್ತಿರುವ ದೂರುಗಳಿವೆ. ಇದು ಸರಿಯಲ್ಲ. ಎಲ್ಲ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೂ ಸಹಾಯ ದೊರೆಯುವಂತೆ ನೋಡಿಕೊಳ್ಳಬೇಕು. ಪರಿಹಾರ ಪಡೆಯಲು ಇರುವ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕು’ ಎಂದು ಸೇಕು ವಿತರಣೆಯನ್ನು ಇನ್ನಷ್ಟು ಸರಳಗೊಳಿಸಬೇಕು ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.