ಗುರುವಾರ , ಜೂನ್ 24, 2021
23 °C

ಮುಗಳಖೋಡ: ಕೋವಿಡ್ ಕೇಂದ್ರ ಆರಂಭಕ್ಕೆ ಆಗ್ರಹ

ಸಂತೋಷ ಮುಗಳಿ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ (ಬೆಳಗಾವಿ ಜಿಲ್ಲೆ): ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದಾಗಿ, ಇಲ್ಲಿನವರ ಅನುಕೂಲಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆ ಆರಂಭಿಸುವಂತೆ ಆಗ್ರಹ ಕೇಳಿಬಂದಿದೆ.

ಮುಗಳಖೋಡ, ಪಾಲಬಾಂವಿ, ಸುಲ್ತಾನಪೂರ, ಕಪ್ಪಲಗುದ್ದಿ, ಮರಾಕೂಡಿ, ಹಂದಿಗುಂದ, ಖಣದಾಳ, ಸವಸುದ್ದಿ ಮೊದಲಾದ ಹಳ್ಳಿಗಳ ಕೋವಿಡ್  ಸೋಂಕಿತರು ಉಸಿರಾಟದ ತೊಂದರೆಯಿಂದ ನಿಧನವಾಗುವುದು ವರದಿಯಾಗುತ್ತಿದೆ. ಇಲ್ಲಿನವರು ಬಾಗಲಕೋಟೆ, ವಿಜಯಪುರ, ಜಮಖಂಡಿ, ಮಹಾಲಿಂಗಪೂರ ಮೊದಲಾದ ಕಡೆಗಳಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಇದೆ. ಇಲ್ಲೇ ಆರೈಕೆ ಸಿಗುವಂತಾದರೆ ಅನುಕೂಲ ಆಗಲಿದೆ ಎನ್ನುವುದು ಜನರ ಒತ್ತಾಯವಾಗಿದೆ.

ಈ ಆಸ್ಪತ್ರೆಯಲ್ಲಿ ಎಲ್ಲ 30 ಹಾಸಿಗೆಗಳಿಗೂ ಆಮ್ಲಜನಕ ಪೈಪ್ ಅಳವಡಿಸಲಾಗಿದೆ. ಆಮ್ಲಜನಕ ಪೂರೈಸಿದಲ್ಲಿ ಮುಗಳಖೋಡ, ಪಾಲಬಾಂವಿ, ಸುಲ್ತಾನಪೂರ, ಕಪ್ಪಲಗುದ್ದಿ, ಮರಾಕೂಡಿ, ಹಂದಿಗುಂದ, ಖಣದಾಳ ಮೊದಲಾದ ಗ್ರಾಮಗಳ ಸೋಂಕಿತರಿಗೆ ತುರ್ತು ಚಿಕಿತ್ಸೆ ದೊರೆಯುವುದರಿಂದ ಸಾವಿನ ಪ್ರಮಾಣ ತಗ್ಗಿಸಬಹುದಾಗಿದೆ ಎನ್ನುತ್ತಾರೆ ಜನರು.

ಬಡವರಿಗೆ ಚಿಕತ್ಸೆ ಒದಗಿಸುವ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಜನಪ್ರತಿನಿಧಿಗಳು ಮುಂದಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

‘ಇಲ್ಲಿನ ಶಾಸಕರು, ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ. ಸೋಂಕಿತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇದು ಸರಿಯಲ್ಲ. ಜನರಿಗೆ ಸ್ಪಂದಿಸಲು ಕ್ರಮ ಕೈಗೊಳ್ಳಬೇಕು’ ಎಂದು ಶ್ರೀಕಾಂತ ಪಾ. ಖೇತಗೌಡರ ಮತ್ತು ಸುರೇಶ ಹೊಸಪೇಟೆ ಕೋರಿದರು.

‘ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರ ತೆರೆಯಲು ಎಲ್ಲ ಸೌಕರ್ಯಗಳೂ ಇವೆ. ಆದರೆ ಆಮ್ಲಜನಕ ಒದಗಿಸಬೇಕಾಗುತ್ತದೆ. ವ್ಯವಸ್ಥೆ ಮಾಡಿದರೆ, ಈ ಭಾಗದ ಬಡ ಜನರ ಚಿಕಿತ್ಸೆಗೆ ಅನುಕೂಲ ಆಗುತ್ತದೆ’ ಎಂದು ಪುರಸಭೆ ಉಪಾಧ್ಯಕ್ಷ ಮಹಾವೀರ ಕುರಾಡೆ ಒತ್ತಾಯಿಸಿದರು.

‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿದ ನಂತರ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ  ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಕೇಂದ್ರ ಆರಂಭಕ್ಕೆ ಕ್ರಮ ವಹಿಸಲಾಗುವುದು’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು