ಸೋಮವಾರ, ಮೇ 17, 2021
21 °C
ಮರಾಠಿ ಭಾಷಿಗರು ಮರುಳಾಗದಿರಲು ಕರೆ

ಎಂಇಎಸ್ ಹೆಗಲ ಮೇಲೆ ಬಂದೂಕಿಟ್ಟು ಬಿಜೆಪಿಗೆ ಕಾಂಗ್ರೆಸ್‌ ಗುಂಡು: ಫಡಣವಿಸ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಬೆಳಗಾವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಅಭ್ಯರ್ಥಿಯ ಹೆಗಲ ಮೇಲೆ ಬಂದೂಕಿಟ್ಟು ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಗುಂಡು ಹೊಡೆಯುತ್ತದೆ. ಅದರ ಭಾಗವಾಗಿಯೇ ಶಿವಸೇನಾ ನಾಯಕ ಸಂಜಯ್ ರಾವುತ್‌ ಇಲ್ಲಿ ಬಂದು ಪ್ರಚಾರ ನಡೆಸಿದ್ದಾರೆ. ಅವರ ಮಾತುಗಳಿಗೆ ಮರಾಠಿ ಭಾಷಿಗರು ಮರುಳಾಗಬಾರದು’ ಎಂದು ಮಹಾರಾಷ್ಟ್ರ ವಿಧಾನಸಭೆ ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಕೋರಿದರು.

ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪಕ್ಷದಿಂದ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇದು ಸಾರ್ವತ್ರಿಕ ಚುನಾವಣೆಯಲ್ಲ. ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಮಂಗಲಾ ನಮ್ಮ (ಬಿಜೆಪಿಯ) ಅಭ್ಯರ್ಥಿಯಾಗಿದ್ದಾರೆ. ಹೀಗಿದ್ದರೂ ಸಂಜಯ್ ಇಲ್ಲಿಗೆ ಬಂದು ಪ್ರಚಾರ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶವನ್ನು ಮರಾಠಿ ಭಾಷಿಗರು ಅರಿಯಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಸಹಾಯ ಮಾಡಲು: ‘ರಾವುತ್ ಕಾಂಗ್ರೆಸ್‌ಗೆ ಸಹಾಯ ಮಾಡುವುದಕ್ಕಾಗಿ ಎಂಇಎಸ್ ಹಾಗೂ ಶಿವಸೇನಾ ಅಭ್ಯರ್ಥಿ ಶುಭಂ ಸೆಳಕೆ ಪರವಾಗಿ ‍ಪ್ರಚಾರ ನಡೆಸಿದ್ದಾರೆ’ ಎಂದು ದೂರಿದರು.

‘ಶಿವಸೇನಾ ಕಟ್ಟಿದ ಬಾಳಾ ಠಾಕ್ರೆ ಅವರನ್ನು ಕ್ಯಾಲೆಂಡರ್‌ನಲ್ಲಿ ಜನಾಬ್ ಠಾಕ್ರೆ ಸಾಹೇಬ್ ಆಗಿಸಿರುವ ಈಗಿನ ಶಿವಸೇನಾ, ಹಿಂದೂ ವಿರೋಧಿ ಟಿಪ್ಪು ಸುಲ್ತಾನ್‌ನನ್ನು ನಾಯಕನನ್ನು ಮಾಡಲು ಹೊರಟಿದೆ. ಶಿವಸೇನಾದ ಹುನ್ನಾರಕ್ಕೆ ಬಲಿಯಾಗಬೇಡಿ. ಮರಾಠಿ ಭಾಷಿಗರು ಹುಲಿಗಳಾಗಿಯೇ ಇರಿ. ಇದು ಸ್ಥಳೀಯ ಸಂಸ್ಥೆ ಚುನಾವಣೆ ಅಲ್ಲ. ದೇಶದ ಸುಭದ್ರತೆಯ ವಿಷಯ ಇದರಲ್ಲಿದೆ ಎನ್ನುವುದನ್ನು ಮರೆಯಬಾರದು’ ಎಂದರು.

‘ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರು ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಶಿವಸೇನಾ ನೇತೃತ್ವದ ಸರ್ಕಾರ ಅಲ್ಲಿದ್ದು, ಮರಾಠಿ ಭಾಷಿಗರ ಮೇಲೆ ಇಲ್ಲದ ಕಾಳಜಿ ಬೆಳಗಾವಿ ಮರಾಠಿ ಭಾಷಿಗರ ಮೇಲೆ ಏಕೆ ಬರುತ್ತಿದೆ? ಸಂಜಯ್ ರಾವುತ್ ಪ್ರೀತಿ ನಕಲಿ ಎನ್ನುವುದು ಇದರಿಂದ ಗೊತ್ತಾಗುತ್ತದೆ. ದೇಶಕ್ಕೆ ನರೇಂದ್ರ ಮೋದಿಯಂಥ ನಾಯಕನ ನೇತೃತ್ವ ಅಗತ್ಯವಿದೆ. ಹೀಗಾಗಿ, ಎಂಇಎಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿ ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಕೋರಿದರು.

ಪಾರದರ್ಶಕ ವ್ಯವಸ್ಥೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ದೇಶದಲ್ಲಿ ಪಾರದರ್ಶಕ ವ್ಯವಸ್ಥೆ ಬಂದಿದೆ. ಸುರಕ್ಷಿತ ವಾತಾವರಣ ಇದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಏಳು ವರ್ಷಕ್ಕಿಂತ ಮುಂಚೆ ಒಂದಿಲ್ಲೊಂದು ಕಡೆ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ಸುಭದ್ರವಾಗಿದೆ. ಭಯೋತ್ಪಾದಕರು ಎಲ್ಲಿ ಬರುತ್ತಿದ್ದರೋ ಅಲ್ಲೇ ಎದ್ದೇಳಲಾಗದಂತೆ ಮಲಗಿಸಲಾಗುತ್ತದೆ. ಅದಕ್ಕೆ ತಕ್ಕ ಸೌಲಭ್ಯಗಳನ್ನು ಸೈನಿಕರಿಗೆ ಒದಗಿಸಲಾಗಿದೆ’ ಎಂದು ತಿಳಿಸಿದರು.

‘ಫಲಾನುಭವಿಗಳಿಗೆ ನಗದನ್ನು ನೇರವಾಗಿ ನೀಡಲಾಗುತ್ತಿದೆ. ಇದರಿಂದ ಹಣ ಮಧ್ಯವರ್ತಿಗಳ ಪಾಲಾಗುವುದು ತಪ್ಪಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಫಲಾನುಭವಿಗಳ ಹಣ ಯಾರ ಪಾಲಾಗುತ್ತಿತ್ತು ಎನ್ನುವುದು ಗೊತ್ತಿದೆಯಲ್ಲವೇ?’ ಎಂದು ಕೇಳಿದರು.

ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಮುರುಗೇಶ ನಿರಾಣಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ರಾಜೇಂದ್ರ ನೇರ್ಲಿ, ಉಜ್ವಲಾ ಬಡವನಾಚೆ, ಜಗದೀಶ ಹಿರೇಮನಿ, ಶಶಿಕಾಂತ ಪಾಟೀಲ, ಶಿವಾಜಿ ಸುಂಠಕರ, ಮನೋಹರ ಕಡೋಲ್ಕರ, ಧನಂಜಯ ಜಾಧವ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು