ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಂತರ ಮಾಯ, ಸೋಂಕಿನ ಅಪಾಯ!

ಸುರಕ್ಷತಾ ಕ್ರಮಗಳತ್ತ ನಿರ್ಲಕ್ಷ್ಯದಿಂದ ಆತಂಕ
Last Updated 7 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ವ್ಯಾಪಕವಾಗಿ ಹರಡುತ್ತಿದ್ದರೂ ಹಾಗೂ ದಂಡ ಪ್ರಯೋಗದ ನಡುವೆಯೂ ಜನರು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸದಿರುವುದು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ಮಾಡುವ ಮೂಲಕ ನಿರ್ಲಕ್ಷ್ಯ ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಇದ್ದಂತೆ ಬಹುತೇಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನಿರ್ಬಂಧಿತ ವಲಯ ಹೊರತುಪಡಿಸಿ ಎಲ್ಲ ಕಡೆಯೂ ಜನಜೀವನ ಸಹಜ ಸ್ಥಿತಿಯ ಹಳಿಗೆ ಬರುತ್ತಿದೆ. ಆದರೆ, ಬಹಳಷ್ಟು ಮಂದಿ ಕೋವಿಡ್‌ ಎಚ್ಚರಿಕೆಯನ್ನು ಮರೆತು ಓಡಾಡುತ್ತಿರುವುದು ಸೋಂಕು ಉಲ್ಬಣಿಸುವ ಅಪಾಯವನ್ನು ತಂದೊಡ್ಡುತ್ತಿದೆ.

ಎಚ್ಚರಿಕೆ ನಡುವೆಯೂ:ಮಾಸ್ಕ್‌ ಧರಿಸದವರು ಹಾಗೂ ಎಲ್ಲೆಂದರಲ್ಲಿ ಉಗುಳುವವರ ಮೇಲೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ನಿಂದ ದೂರವಿರಲು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳವರು ಮತ್ತು ಪೊಲೀಸ್ ಇಲಾಖೆಯವರು ಮಾಸ್ಕ್‌ ಧರಿಸದವರಿಂದ ದಂಡ ವಿಧಿಸುವ ಚಟುವಟಿಕೆಯನ್ನೂ ನಡೆಸುತ್ತಿದ್ದಾರೆ. ಈ ನಡುವೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದಿರುವುದು ಸಾಮಾನ್ಯ ಎನ್ನುವಂತಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದಂತೆ ಜಿಲ್ಲೆಯಾದ್ಯಂತ ತಹಶೀಲ್ದಾರರ ಕಚೇರಿಗಳ ಬಳಿ ಕೋವಿಡ್ ಪರಿಸ್ಥಿತಿಯ ಮುಂಚಿನಂತೆಯೇ ನಿತ್ಯ ಹಲವು ಸಂಘಟನೆಗಳವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸುತ್ತಿದ್ದಾರೆ. ಈ ವೇಳೆ ಹಲವರು ಮಾಸ್ಕ್‌ ಹಾಕದಿರುವುದು, ಹಾಕಿದ್ದರೂ ಸಮರ್ಪಕವಾಗಿಲ್ಲದಿರುವುದು ಕಂಡುಬರುತ್ತಿದೆ. ಅಲ್ಲದೇ, ಅಂತರ ಮಾಯವಾಗಿರುವುದನ್ನು ಕೂಡ ಗುರುತಿಸಬಹುದಾಗಿದೆ. ಕೋವಿಡ್ ಭೀತಿಯ ನಡುವೆಯೂ ಕಾರ್ಯಕ್ರಮಗಳನ್ನು ಆಯೋಜಿಸುವುದು ಕೂಡ ನಿಂತಿಲ್ಲ. ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ, ನಿರ್ಲಕ್ಷ್ಯ ವಹಿಸುತ್ತಿರುವುದದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ. ಜೊತೆಗೆ, ಮುನ್ನೆಚ್ಚರಿಕೆ ವಹಿಸುವವರಿಗೂ ಭೀತಿ ಉಂಟು ಮಾಡುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗೆಂದು ನಿಗದಿಪಡಿಸಿದ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಇಲ್ಲವಾಗಿದೆ.

300ರ ಗಡಿ ದಾಟಿದ ಮೃತರ ಸಂಖ್ಯೆ!

ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ ಗುಣಮುಖರಾಗುವವರ ಸಂಖ್ಯೆಯೂ ಜಾಸ್ತಿ ಇದೆ. ಅಂತೆಯೇ ಸಾವಿಗೀಡಾಗುವವರ ಪ್ರಕರಣಗಳೂ ಏರುತ್ತಿದೆ. ಕೋವಿಡ್‌–19ನಿಂದ ಬಳಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರದರೆಗೆ 309 ಮಂದಿ ಸಾವಿಗೀಡಾಗಿದ್ದಾರೆ. ಹೀಗಿದ್ದರೂ ಸಭೆ–ಸಮಾರಂಭಗಳಲ್ಲಿ ಸುರಕ್ಷತಾ ಕ್ರಮಗಳಿಗೆ ಆದ್ಯತೆ ಕೊಡುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳು, ಸಂಘಟನೆಗಳು ಹಿಂದೆ ಬಿದ್ದಿಲ್ಲ.

ಈಚೆಗೆ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕಾಂಗ್ರೆಸ್‌ ಭವನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಪಾಲ್ಗೊಂಡಿದ್ದ ನೂರಾರು ಮಂದಿ ಅಂತರ ಕಾಪಾಡಿಕೊಳ್ಳದೇ ಇರುವುದನ್ನು ಪ್ರಸ್ತಾಪಿಸಿದ್ದರು. ‘ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕೊರೊನಾ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು’ ಎಂದು ಸಲಹೆ ನೀಡಿದ್ದರು.

ಪ್ರತಿಕ್ರಿಯೆ

ಕೊರೊನಾ ಬಗ್ಗೆ ಸಾರ್ವಜನಿಕರು ಬಹಳ ಮುನ್ನೆಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ನಾನು ಗುಣಮುಖವಾದರೂ ಫೇಸ್ ಶೀಲ್ಡ್‌ ಹಾಕುವುದು ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿದ್ದೇನೆ
-ಅನಿಲ ಬೆನಕೆ,ಶಾಸಕ, ಉತ್ತರ ಮತ ಕ್ಷೇತ್ರ

ಸಾರ್ವಜನಿಕರು ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಒಂದೆಡೆಯಾದರೆ, ಸ್ವಯಂ ಮುನ್ನೆಚ್ಚರಿಕೆ ವಹಿಸುವುದು ಮಹತ್ವದ್ದಾಗುತ್ತದೆ. ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು.
-ಎಂ.ಜಿ. ಹಿರೇಮಠ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT