ಮಂಗಳವಾರ, ಮೇ 17, 2022
27 °C

ಸೇನಾ ಭರ್ತಿ ರ‍್ಯಾಲಿಗೆ ಅಗತ್ಯ ಸೌಲಭ್ಯ: ಜಿಲ್ಲಾಧಿಕಾರಿ ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೇನಾ ಭರ್ತಿ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿನ ವಿಟಿಯು ಮೈದಾನದಲ್ಲಿ ಗುರುವಾರದಿಂದ ಆರಂಭವಾದ ರ‍್ಯಾಲಿಗೆ ಹಸಿರುನಿಶಾನೆ ತೋರಿಸಿ ಚಾಲನೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ರ‍್ಯಾಲಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಮಹಾನಗರ ಪಾಲಿಕೆಯಿಂದ ಮೊಬೈಲ್ ಶೌಚಾಲಯ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಬಸ್ ಹಾಗೂ ರೈಲು ನಿಲ್ದಾಣದಿಂದ ವಿಟಿಯುಗೆ ವಿಶೇಷ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೋವಿಡ್-19 ಪರಿಸ್ಥಿತಿಯಲ್ಲಿ ಸೇನೆಯ ಸೇರ್ಪಡೆಗೆ ದಾಖಲೆಯ ಸಂಖ್ಯೆಯ ಅಭ್ಯರ್ಥಿಗಳು ನೋಂದಾಯಿಸಿದ್ದಾರೆ’ ಎಂದರು.

ಒಳ್ಳೆಯ ಸೌಲಭ್ಯ: ‘ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ಅತಿ ಹೆಚ್ಚು ಯುಕವರು ಸೇನೆಗೆ ಸೇರಲು ಉತ್ಸುಕರಾಗಿದ್ದಾರೆ. ಅವರಿಗೆ ಪೀರನವಾಡಿಯ ಕಲ್ಯಾಣಮಂಟಪಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಲ್ಲೂ ದೇಶ ಸೇವೆಯ ಮನೋಭಾವ ಎದ್ದು ಕಾಣುತ್ತಿದೆ. ಈ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಸೇನೆ ಸೇರಲೆಂಬ ಆಶಯ ನಮ್ಮದು. ಅವರು ಸರ್ಕಾರಿ ನೌಕರಿ ಪಡೆದರೆ ಕುಟುಂಬಕ್ಕೆ ಆಸರೆಯಾಗುತ್ತಾರೆ. ಉತ್ತಮ ಸಂಬಳ ಹಾಗೂ ಪಿಂಚಣಿ ಮೊದಲಾದ ಸೌಲಭ್ಯವನ್ನು ಸೇನೆಯಲ್ಲಿ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

‘ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಅಂದಾಜು 32ಸಾವಿರ ಮಾಜಿ ಸೈನಿಕರಿದ್ದಾರೆ. ಇದು ಹೆಮ್ಮೆಯ ವಿಷಯ. ಸೈನ್ಯ ಹಾಗೂ ಪೊಲೀಸ್ ಇಲಾಖೆ ಸೇರಲು ನಮ್ಮ ಯುವಕರು ಉತ್ಸಾಹದಿಂದ ಬರುತ್ತಾರೆ’ ಎಂದರು.

ಬ್ರಿಗೇಡಿಯರ್ ಎ.ಎಸ್. ವಾಳಿಂಬೆ, ‘ರ‍್ಯಾಲಿಗೆ ಜಿಲ್ಲಾಡಳಿತದಿಂದ ಉತ್ತಮ ಸಹಕಾರ ದೊರೆತಿದೆ’ ಎಂದು ತಿಳಿಸಿದರು.

ಮುಂದಿನ ಹಂತಕ್ಕೆ ಆಯ್ಕೆಯಾದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಲು ತಳಕಲ್ ಗ್ರಾಮದ ಶಿವಪ್ಪ, ‘ದೇಶ ಸೇವೆ ಮಾಡಬೇಕು ಎಂಬ ನನ್ನ ಬಹುದಿನಗಳ ಕನಸು ನನಸಾಗುತ್ತಿದೆ. ಇದರಿಂದ ಖುಷಿಯಾಗಿದೆ. ತಂದೆ–ತಾಯಿಗೆ ನಾನೊಬ್ಬನೇ ಮಗ. ಆದರೂ ಅವರೆಂದೂ ನನ್ನ ದೇಶ ಸೇವೆ ಕನಸಿಗೆ ಅಡ್ಡಿಯಾಗಿಲ್ಲ. ಒಂದು ವರ್ಷದಿಂದ ತಳಕಲ್‍ನಲ್ಲಿರುವ ನಮ್ಮ ಹೊಲದಿಂದ ಕೊಪ್ಪಳದವರೆಗೆ ಓಡಿ ಅಭ್ಯಾಸ ಮಾಡಿದ್ದೆ. ಹೀಗಾಗಿ, ಇಲ್ಲಿ ಓಟದ ಸ್ಪರ್ಧೆಯಲ್ಲಿ ಮುಂದೆ ಬರಲು ಸಾಧ್ಯವಾಯಿತು’ ಎಂದು ಹಂಚಿಕೊಂಡರು.

ನಸುಕಿನಿಂದಲೇ ಆರಂಭವಾದ ಪ್ರಕ್ರಿಯೆಗೆ ಸೈನ್ಯಾಧಿಕಾರಿಗಳು, ತಂಡ ತಂಡವಾಗಿ ಯುವಕರನ್ನು ಪರೀಕ್ಷೆಗಾಗಿ ಒಳಗಡೆಗೆ ಕಳುಹಿಸುತ್ತಿದ್ದರು. ಆಯ್ಕೆಯಾದವರು ಖುಷಿಯಾಗಿ ಪ್ರಮಾಣಪತ್ರ ಪಡೆದರು. ಅನುತ್ತೀರ್ಣರಾದವರು ನಿರಾಸೆಯಿಂದ, ಕೆಲವರು ಕಣ್ಣೀರಿಟ್ಟು ಹೊರಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿಟಿಯು ಹೊರಗೂ ನೂರಾರು ಮಂದಿ ಯುವಕರು ಇದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

***

ಆಸ್ಪತ್ರೆಗೆ ಡಿಸಿ ಭೇಟಿ
ಬಳಿಕ ಜಿಲ್ಲಾಸ್ಪತ್ರೆ ಆವರಣಕ್ಕೆ ತೆರಳಿದ ಜಿಲ್ಲಾಧಿಕಾರಿ ಹಿರೇಮಠ, ಕೋವಿಡ್ ಪರೀಕ್ಷೆಗಾಗಿ ಸರದಿಯಲ್ಲಿ ನಿಂತಿದ್ದ ಸೇನಾಕಾಂಕ್ಷಿಗಳನ್ನು ಭೇಟಿಯಾದರು. ‘ಸೇನಾ ರ‍್ಯಾಲಿಯಲ್ಲಿ ಭಾಗವಹಿಸಲು ಕೋವಿಡ್ ಪರೀಕ್ಷಾ ವರದಿ ಕಡ್ಡಾಯವೇನಿಲ್ಲ. ಆದರೆ, ಕೋವಿಡ್ ಲಕ್ಷ್ಮಣವಿಲ್ಲ ಎನ್ನುವ ಪ್ರಮಾಣಪತ್ರವಷ್ಟೆ ಸಾಕು ಎಂದು ತಿಳಿಸಿದರು. ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರ ನೀಡಲು ವೈದ್ಯರನ್ನು ವ್ಯವಸ್ಥೆ ಮಾಡಬೇಕು’ ಎಂದು ಬಿಮ್ಸ್ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು