ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ‘ಬರ’ದ ಬವಣೆ ಮಧ್ಯೆಯೂ ದೀಪಾವಳಿ ಸಂಭ್ರಮ

Published 9 ನವೆಂಬರ್ 2023, 5:25 IST
Last Updated 9 ನವೆಂಬರ್ 2023, 5:25 IST
ಅಕ್ಷರ ಗಾತ್ರ

ಬೆಳಗಾವಿ: ಯಾವುದೇ ಹಬ್ಬ ಬಂದರೂ ಬೆಳಗಾವಿಯಲ್ಲಿ ಸಂಭ್ರಮವೋ ಸಂಭ್ರಮ. ಅಂತೆಯೇ, ಈ ಬಾರಿ ‘ಬರದ ಬವಣೆ’ ಮಧ್ಯೆಯೂ ‘ದೀಪಾವಳಿ’ ಹಬ್ಬದ ಸಡಗರ ಮನೆಮಾಡಿದ್ದು, ಬೆಳಗಾವಿಯ ಮಾರುಕಟ್ಟೆ ಕಳೆಗಟ್ಟಿದೆ.

ಪ್ರತಿಬಾರಿ ದೀಪಾವಳಿಯಲ್ಲಿ ವಿದೇಶಿ ವಸ್ತುಗಳೇ ಹೆಚ್ಚಾಗಿ ಲಗ್ಗೆ ಇಡುತ್ತಿದ್ದವು. ಈ ಬಾರಿ ಅವುಗಳ ಪ್ರಮಾಣ ತುಸು ತಗ್ಗಿದೆ. ಹಬ್ಬಕ್ಕೆ ಮೂರು ದಿನ ಮಾತ್ರ ಬಾಕಿ ಇದ್ದು, ಸ್ಥಳೀಯವಾಗಿ ಸಿದ್ಧವಾದ ವಸ್ತುಗಳನ್ನು ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ.

ಇಲ್ಲಿನ ಗಣಪತ ಗಲ್ಲಿ, ಮಾರುತಿ ಗಲ್ಲಿ, ಖಡೇಬಜಾರ್‌, ಪಾಂಗುಳ ಗಲ್ಲಿ, ಬುರುಡ ಗಲ್ಲಿ ಮತ್ತಿತರ ಪ್ರದೇಶಗಳು ಬಗೆಬಗೆಯ ವಿನ್ಯಾಸಗಳ ಆಕಾಶಬುಟ್ಟಿಗಳಿಂದ ಕಂಗೊಳಿಸುತ್ತಿವೆ. ಬಣ್ಣದ ಕಾಗದ, ಬಟ್ಟೆ, ಕಟ್ಟಿಗೆ ಮತ್ತು ಬಿದಿರಿನಿಂದ ತಯಾರಿಸಿದ ಆಕಾಶಬುಟ್ಟಿ ಗ್ರಾಹಕರನ್ನು ಸೆಳೆಯುತ್ತಿವೆ. ಅವುಗಳ ದರ ₹150 ರಿಂದ ₹2 ಸಾವಿರದವರೆಗೆ ಇದೆ.

‘ಬಿದಿರಿನಿಂದ ತಯಾರಿಸಿದ ಆಕಾಶಬುಟ್ಟಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಉತ್ತಮ ವಹಿವಾಟು ನಡೆಯುತ್ತಿದೆ. ಬೆಳಗಾವಿ ಮಾತ್ರವಲ್ಲದೆ; ಮಹಾರಾಷ್ಟ್ರ ಮತ್ತು ಗೋವಾದಿಂದ ಗ್ರಾಹಕರು ಆಗಮಿಸಿ ಖರೀದಿಸುತ್ತಿದ್ದಾರೆ. ಹಬ್ಬ ಸಮೀಪಿಸುತ್ತಿದ್ದಂತೆ ಖರೀದಿ ಇನ್ನಷ್ಟು ಹೆಚ್ಚಲಿದೆ’ ಎಂದು ಬುರುಡ ಗಲ್ಲಿಯ ವ್ಯಾಪಾರಿ ಸಂಜಯ ತೆವರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣತೆಗಳ ಖರೀದಿ ಜೋರು: ಮಣ್ಣು ಮತ್ತು ಪ್ಲಾಸ್ಟಿಕ್‌ನಿಂದ ತಯಾರಿಸಿದ ಆಕರ್ಷಕ ವಿನ್ಯಾಸದ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಳೆದ ವರ್ಷ ಒಂದು ಡಜನ್‌ ಹಣತೆಗೆ ₹30 ಇತ್ತು. ಈ ಬಾರಿ ₹40ಕ್ಕೆ ಏರಿಕೆಯಾಗಿದೆ. ದೊಡ್ಡ ಹಣತೆಗಳ ದರ ₹200ರವರೆಗೆ ಇದೆ. ಮನೆಯ ತೋರಣಗಳು ಮತ್ತು ಪ್ಲಾಸ್ಟಿಕ್‌ ಹೂಮಾಲೆಗಳು ₹150ರಿಂದ ₹300ರವರೆಗೆ ಮಾರಾಟವಾಗುತ್ತಿವೆ.

ತುಂತುರು ಮಳೆ ಮಧ್ಯೆಯೂ ನಗರದ ಮಾರುಕಟ್ಟೆಯಲ್ಲಿ ಬುಧವಾರ ಜನದಟ್ಟಣೆ ಕಂಡುಬಂತು. ಮಹಿಳೆಯರು, ಮಕ್ಕಳು, ಯುವಕ–ಯುವತಿಯರು ಆಕಾಶಬುಟ್ಟಿಗಳು, ಹಣತೆಗಳು, ವಿವಿಧ ಬಣ್ಣದ ರಂಗೋಲಿ, ಹೊಸ ಬಟ್ಟೆಗಳು, ವಿದ್ಯುದ್ದೀಪಗಳು ಮತ್ತು ಆಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂತು.

‘ಈ ಸಲ ಉತ್ತಮ ಮಳೆಯಾಗಿಲ್ಲ. ಬೆಳೆಯೂ ಬಂದಿಲ್ಲ. ಮತ್ತೊಂದೆಡೆ ವಿವಿಧ ವಸ್ತುಗಳ ಬೆಲೆಯೂ ತುಟ್ಟಿಯಾಗಿದೆ. ಆದರೂ, ದೀಪಾವಳಿಗೆ ಒಂದಿಷ್ಟು ವಸ್ತುಗಳನ್ನು ಖರೀದಿಸುತ್ತಿದ್ದೇವೆ’ ಎನ್ನುತ್ತಾರೆ ತಾಲ್ಲೂಕಿನ ಹೊನ್ನಿಹಾಳದ ಗ್ರಾಹಕ ಅಭಿಷೇಕ ಕೆಂಗೇರಿ.

ದೀಪಾವಳಿ ಅಂಗವಾಗಿ ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಹಣತೆಗಳ ಮಾರಾಟ

ದೀಪಾವಳಿ ಅಂಗವಾಗಿ ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಹಣತೆಗಳ ಮಾರಾಟ

– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

‘ಬೆಳಕಿನ ಹಬ್ಬ’ದ ಪ್ರಯುಕ್ತ ಬೆಳಗಾವಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಆಕಾಶಬುಟ್ಟಿಗಳು

‘ಬೆಳಕಿನ ಹಬ್ಬ’ದ ಪ್ರಯುಕ್ತ ಬೆಳಗಾವಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಆಕಾಶಬುಟ್ಟಿಗಳು

– ಪ್ರಜಾವಾಣಿ ಚಿತ್ರ

ಕಳೆದ ವರ್ಷಕ್ಕಿಂತ ಈ ವರ್ಷ ಆಕಾಶಬುಟ್ಟಿಗಳ ದರ ಶೇ 20ರಷ್ಟು ಹೆಚ್ಚಾಗಿದೆ. ಪಾರಂಪರಿಕ ಶೈಲಿಯ ಮತ್ತು ಫ್ಯಾನ್ಸಿ ಆಕಾಶಬುಟ್ಟಿ ಲಭ್ಯವಿದ್ದು ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ –
ಪ್ರಭಾಕರ ಅಮಲೆ ವ್ಯಾಪಾರಿ ಗಣಪತ ಗಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT