ಬೆಳಗಾವಿ: ‘ರಾಜ್ಯದಲ್ಲಿ ಬಹುಪಾಲು ಕಾಲುವೆಗಳ ನೀರು ಕೊನೆಯ ಹಂತದ ರೈತರಿಗೆ ತಲುಪುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಕಾನೂನು ತರಲಾಗುವುದು’ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
‘ಕಾಲುವೆಗಳ ನೀರನ್ನು ಹಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ನೀರು ರಕ್ಷಣೆ ಮಾಡಲು ಪ್ರತ್ಯೇಕ ಕಾನೂನು ಅಗತ್ಯವಾಗಿದೆ’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
‘ಮಹಾರಾಷ್ಟ್ರದಲ್ಲಿ ನೀರಿನ ಬಳಕೆ ತುಂಬ ಶಿಸ್ತಿನಿಂದ ನಡೆಯುತ್ತಿದೆ. ನಾನು ಖುದ್ದಾಗಿ ಅಲ್ಲಿಗೆ ಭೇಟಿ ನೀಡಿ ನೋಡುತ್ತೇನೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿ ಮಾಡುತ್ತೇನೆ’ ಎಂದರು.
‘ನೀರು ಬಳಕೆದಾರರ ಸಂಘಗಳು ಕೆಲವು ಕಡೆ ಮಾತ್ರ ಕ್ರಿಯಾಶೀಲವಾಗಿವೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯದೆಲ್ಲೆಡೆ ನೀರು ಬಳಕೆದಾರರ ಸಂಘಗಳು ಕ್ರಿಯಾಶೀಲವಾಗಬೇಕು. ಜಲಸಂಪನ್ಮೂಲ ಹಾಗೂ ‘ಕಾಡಾ’ ಅಧಿಕಾರಿಗಳು ಇದನ್ನು ಮಾಡಲೇಬೇಕು. ಅಗತ್ಯಬಿದ್ದರೆ ಹೊಸ ಸಂಘಗಳನ್ನು ರಚನೆ ಮಾಡಬೇಕು. ಕಾಲಕಾಲಕ್ಕೆ ಚುನಾವಣೆ ನಡೆಸಿ ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಎರಡು ದಿನದಲ್ಲಿ ಆದೇಶ ಹೊರಡಿಸುತ್ತೇನೆ’ ಎಂದರು.
‘ನೀರು ಬಳಕೆಯ ಜವಾಬ್ದಾರಿಯನ್ನು ರೈತರೇ ತೆಗೆದುಕೊಳ್ಳಬೇಕು. ನೀರು ಹರಿಸುವುದು, ಕಾಮಗಾರಿ ನಡೆಸುವುದು ಸೇರಿದಂತೆ ಬಹುಮುಖ್ಯ ಚರ್ಚೆಗಳು ಸಂಘದಲ್ಲಿ ಆಗಬೇಕು. ಹೀಗಾಗಿ, ಈ ಸಂಘಗಳನ್ನು ಕ್ರಿಯಾಶೀಲ ಮಾಡುವುದು ಮುಖ್ಯ’ ಎಂದರು.
‘ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಿಂದ ಎಲ್ಲ ಅಧಿಕಾರಿ– ಸಿಬ್ಬಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ರಾಜ್ಯ ಎಲ್ಲ ವಿಭಾಗಗಳಲ್ಲೂ ಒಂದೊಂದು ಕೇಂದ್ರ ತೆರೆದು ನೀರಿನ ಸದ್ಬಳಕೆಯ ಬಗ್ಗೆ ಪರಿಪೂರ್ಣ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಶಿವಕುಮಾರ ತಿಳಿಸಿದರು.
ರಾಜ್ಯಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಮಹೇಂದ್ರ ತಮ್ಮಣ್ಣವರ ಕೂಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.