ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿಗೆ ಬಿಜೆಪಿಯದ್ದೇ ಅಡ್ಡಗಾಲು: ಡಿ.ಕೆ.ಶಿವಕುಮಾರ್‌

ಬೆಳಗಾವಿ, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಡಿ.ಕೆ.ಶಿವಕುಮಾರ್‌ ವಿಶ್ವಾಸ
Published 16 ಏಪ್ರಿಲ್ 2024, 4:58 IST
Last Updated 16 ಏಪ್ರಿಲ್ 2024, 4:58 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹದಾಯಿ ಯೋಜನೆಗೆ ನಾವು ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿದ್ದೇವೆ. ಆದರೆ, ಕೇಂದ್ರ ಪರಿಸರ ಇಲಾಖೆಯಿಂದಲೇ ಅನುಮತಿ ಕೊಟ್ಟಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಅವರ ನಾಮಪತ್ರ ಸಲ್ಲಿಸಲು ಸೋಮವಾರ ಬೆಳಿಗಾವಿಗೆ ಬಂದಿದ್ದ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ನಾವು ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಜನ ಅದರ ಫಲ ಅನುಭವಿಸುತ್ತಿದ್ದಾರೆ. ಆದರೆ, ಬಿಜೆಪಿಯವರು ಕೊಟ್ಟ ಯಾವ ಭರವಸೆ ಈಡೇರಿಸಿದ್ದಾರೆ ಕೇಳಿ. ಕೋವಿಡ್‌ ಸಂದರ್ಭದಲ್ಲಿ ₹20 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಯಾರಿಗೆ ಕೊಟ್ಟಿದ್ದೀರಿ? ಯಾವ ಕೆಲಸಕ್ಕೆ ಕೊಟ್ಟಿದ್ದೀರಿ? ಒಂದು ಪಟ್ಟಿ ಕೊಡಿ’ ಎಂದು ಕೇಳಿದರು.

‘ಕೋವಿಡ್‌ ಔಷಧಿಗಳ ಮೇಲೆ ಪುಕ್ಕಟೆಯಾಗಿ ಮೋದಿ ಅವರ ಫೋಟೊ ಹಾಕಿ ಪ್ರಚಾರ ಮಾಡಿದರಿ. ಆದರೆ, ಸತ್ತವರ ಪ್ರಮಾಣ ಪತ್ರಗಳ ಮೇಲೆ ಏಕೆ ಪೋಟೊ ಹಾಕಲಿಲ್ಲ ತಿಳಿಸಿ’ ಎಂದರು.

‘ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಬದಲಾಗಿ, ಮಾರಕವಾದ ಮೂರು ಕಾಯ್ದೆ ಜಾರಿಗೆ ತಂದರು. ಸಾಕಷ್ಟು ಹೋರಾಟದ ಬಳಿಕ, 700 ರೈತರು ಪ್ರಾಣ ಬಲಿ ಕೊಟ್ಟ ಬಳಿಕ ಮೋದಿ ಅವರು ಕಾಯ್ದೆ ಹಿಂಪಡೆದರು’ ಎಂದು ಶಿವಕುಮಾರ್‌ ಟೀಕಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ ಅವರು ನೀಡಿದ ‘ಪೆಗ್‌’ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ಇಂಥ ನೂರು ಸಂಜಯ ಪಾಟೀಲ ಅವರನ್ನು ಎದುರಿಸಿ ಮೇಲೆದ್ದು ಬರುವ ಶಕ್ತಿ ನಮ್ಮ ಸಚಿವೆಗೆ ಇದೆ. ಇಂಥವರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದರು.

ಚುನಾವಣೆ ಬಳಿಕ ಡಬಲ್‌ ಎಂಜಿನ್ ಸರ್ಕಾರ ಮರಳಿ ಬರಲಿದೆ ಎಂಬ ಶಾಸಕ ರಮೇಶ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ನನ್ನ ಲೇವಲ್ಲಿಗೆ ಇರುವ ವ್ಯಕ್ತಿಗೆ ಮಾತ್ರ ನಾನು ಪ್ರತಿಕ್ರಿಯಿಸುತ್ತೇನೆ’ ಎಂದರು.

‘ಭಾರತ್‌ ಮಾತಾ ಕಿ ಜೈ ಎಂದು ಹೇಳಲು ಕಾಂಗ್ರೆಸ್‌ನಲ್ಲಿ ವರಿಷ್ಠರ ಅನುಮತಿ ಪಡೆಯಬೇಕಾದ ಸ್ಥಿತಿ ಇದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ, ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟವರು, ಸಂವಿಧಾನ ಕೊಟ್ಟವರು ನಾವೇ. ಈಗ ಮಾತನಾಡುವವರು ಆಗ ಎಲ್ಲಿ ಹೋಗಿದ್ದೀರಿ?’ ಎಂದೂ ಪ್ರಶ್ನಿಸಿದರು.

ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್‌ ಸೇಠ್‌, ಲಕ್ಷ್ಮಣ, ಸವದಿ, ರಾಜು ಕಾಗೆ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ಮಹಾರಾಷ್ಟ್ರದ ಶಾಸಕ ಧೀರಜ್‌ ದೇಶಮುಖ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಆಯೇಷಾ ಸನದಿ ಹಲವರು ಇದ್ದರು.

‘ಮಾನವೀಯತೆ ಇಲ್ಲದ ಬಿಜೆಪಿ’

‘ಬಿಜೆಪಿ ನಾಯಕರಿಗೆ ಮಾನವೀಯತೆ ಎನ್ನುವುದೇ ಇಲ್ಲ. ಬೆಳಗಾವಿ ಸಂಸದರಾಗಿದ್ದ ಸುರೇಶ ಅಂಗಡಿ ಅವರು ಕೋವಿಡ್‌ನಿಂದ ನಿಧನರಾದಾಗ ಅವರ ಶವವನ್ನೂ ಗೌರವದಿಂದ ನಡೆಸಿಕೊಳ್ಳಲಿಲ್ಲ. ಜೆಸಿಬಿ ಮೂಲಕ ದೆಹಲಿಯಲ್ಲೇ ಮಣ್ಣು ಮಾಡಿದರು. ಕೇಂದ್ರ ಸರ್ಕಾರದಲ್ಲಿ ಸಚಿವರಾದ ಅವರ ದೇಹವನ್ನು ಏಕೆ ಬೆಳಗಾವಿಗೆ ತರಲು ಆಗಲಿಲ್ಲ. ಪ್ರಧಾನಿ ಮೋದಿ ಬಂದರೆ ಹತ್ತಾರು ವಿಮಾನ ಹೆಲಿಕಾಪ್ಟರ್‌ ಹಾರಾಡುತ್ತವೆ. ಅಂಗಡಿ ಅವರು ನಿಧನರಾದಾಗ ಈ ವ್ಯವಸ್ಥೆ ಇರಲಿಲ್ಲವೇ?’ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು. ‘ಸ್ವತಃ ಜಗದೀಶ ಶೆಟ್ಟರ್‌ ಅವರೇ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಈ ಭಾಗದ ದೊಡ್ಡ ನಾಯಕನ ಅಂತಿಮ ದರ್ಶನ ಮಾಡುವ ಅವಕಾಶವನ್ನೂ ಜನರಿಗೆ ನೀಡಲಿಲ್ಲ. ಅದೇ ಸಂದರ್ಭದಲ್ಲಿ ನನ್ನ ಸಹೋದರ ಡಿ.ಕೆ.ಸುರೇಶ್‌ ಅವರು ಮುಂದೆ ನಿಂತು ಹಲವರ ಅಂತ್ಯಸಂಸ್ಕಾರ ಮಾಡಿದರು. ಅವರಗೇನಾದರೂ ಕೆಟ್ಟದ್ದು ಆಯಿತೇ? ಅಂಥ ಧೈರ್ಯವನ್ನು ಅಂಗಡಿ ಅವರ ವಿಚಾರದಲ್ಲಿ ಏಕೆ ತೋರಸಲಿಲ್ಲ’ ಎಂದೂ ಟೀಕಿಸಿದರು.

‘ರೇಟ್‌ ಫಿಕ್ಸ್‌ ಮಾಡುವ ಚಟ ಕುಮಾರಸ್ವಾಮಿಗೆ ಇದೆ’

‘ನಾನು ಯಾವುದೋ ಹೆಣ್ಣುಮಗಳ ಕೆನ್ನೆ ಸವರಿ ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ರೀತಿ ಕೆನ್ನೆ ಸವರುವುದು ರೇಟ್‌ ಫಿಕ್ಸ್‌ ಮಾಡುವುದಲ್ಲಿ ಸಾಕಷ್ಟು ಅನುಭವ ಅವನಿಗೆ ಇದೆ’ ಎಂದು ಡಿ.ಕೆ.ಶಿವಕುಮಾರ್‌ ಏಕವಚನದಲ್ಲಿ ಕಿಡಿ ಕಾರಿದರು. ‘ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಆಗಿ ಮಾತನಾಡಿದ ಇಂಥವರಿಗೆ ಹೆದರಬಾರದು. ಆತ್ಮಸ್ಥೈರ್ಯ ಕೊಡಲು ನಾವು ಇದ್ದೇವೆ. ನೀವು ಚುನಾವಣೆಯಲ್ಲೇ ಪಾಠ ಕಲಿಸಿ’ ಎಂದರು. ‘ಗ್ಯಾರಂಟಿ ಯೋಜನೆಗಳನ್ನು ಪಿಕ್‌ಪಾಕೆಟ್‌ ಎಂದು ಹೀಯಾಳಿಸುವ ಆ ಕುಮಾರನಿಗೆ ಪಿಕ್‌ಪಾಕೇಟ್‌ ಬಹಳ ದಿನಗಳಿಂದ ರೂಢಿ. ಬ್ಯ್ಲಾಕ್‌ಮೇಲ್‌ ಮಾಡುವುದು ಚಟ’ ಎಂದು ಡಿ.ಕೆ. ಶಿವಕುಮಾರ್‌ ಟೀಕಿಸಿದರು. ‘ಕುಮಾರಸ್ವಾಮಿ ನಾನು ಗಳಸ್ಯ– ಕಂಠಸ್ಯ. ಅದಕ್ಕೆ ನನ್ನ ಬಗ್ಗೆ ಪದೇಪದೇ ಆರೋಪಿಸುತ್ತಾರೆ. ನಾನು ಸಾವಿರಾರು ಕೋಟಿ ಆಸ್ತಿವಂತನೋ ಭಿಕ್ಷುಕನೋ ಕಲ್ಲು ಲೂಟಿ ಮಾಡಿದ್ದೇನೋ? ದಾಖಲೆ ಸಮೇತ ವಿಧಾನಸೌಧದಲ್ಲಿ ಬಾರಯ್ಯ; ನಾನು ಚರ್ಚೆಗೆ ಸಿದ್ಧ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ವರ್ಷದ ಹಿಂದಷ್ಟೇ ಈ ಅಪ್ಪ– ಮಗ ಅಮಿತ್‌ ಶಾ ಅವರನ್ನು ಟೀಕಿಸಿದ್ದರು. ಮೋಸ– ದ್ರೋಹವಾಗಿದೆ ಎಂದಿದ್ದರು. ಆದರೆ ಈಗ ದ್ರೋಹ ಮಾಡಿದವರನ್ನೇ ಅಪ್ಪಿ ಅಂಟಿಕೊಂಡು ಕೂತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT