ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಸೆಳೆದ ಶ್ವಾನಗಳ ಪ್ರದರ್ಶನ

ಐನಾಪುರದ ಕೃಷಿ ಮೇಳದಲ್ಲಿ ಆಯೋಜನೆ
Last Updated 16 ಜನವರಿ 2020, 12:04 IST
ಅಕ್ಷರ ಗಾತ್ರ

ಮೋಳೆ(ಬೆಳಗಾವಿ): ಸಾಕು ನಾಯಿಗಳು ಮಾಲೀಕರೊಂದಿಗೆ ವೇದಿಕೆಯಲ್ಲಿ ರ‍್ಯಾಂಪ್ ವಾಕ್ ಮಾಡಿದವು. ಕೆಲವೊಂದು ದೊಡ್ಡ ನಾಯಿಗಳು ತುಂಟತನದೊಂದಿಗೆ ನೋಡುಗರನ್ನು ಸೆಳೆದವು. ತರಹೇವಾರಿ ಉಡುಪುಗಳಲ್ಲಿ ಮಿಂಚಿದವು. ಇದಕ್ಕೆಲ್ಲವೂ ವೇದಿಕೆಯಾಗಿದ್ದು ಐನಾಪುರದಲ್ಲಿ ಸಿದ್ದೇಶ್ವರ ಜಾತ್ರೆ ಅಂಗವಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ನಡೆದ ಶ್ವಾನಗಳ ಪ್ರದರ್ಶನ.

ಮಾಲೀಕರು ತಮ್ಮ ಶ್ವಾನಗಳಿಗೆ ವಿವಿಧ ರೀತಿಯ ಉಡುಪು ತೊಡಿಸಿ, ಸಿಂಗಿರಿಸಿದ್ದರು. 20ಕ್ಕೂ ಹೆಚ್ಚಿನ ವಿವಿಧ ತಳಿಯ 350 ಶ್ವಾನಗಳು ಬಂದಿದ್ದವು. ಶ್ವಾನಪ್ರಿಯರು ಅವುಗಳನ್ನು ಸುತ್ತುವರಿದು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಕೆಲವರು ನಾಯಿಗಳ ಜೊತೆ ಆಟವಾಡಿ ಕಾಲ ಕಳೆದರು. ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದಲೂ ಹಲವರು ಶ್ವಾನಗಳನ್ನು ತಂದಿದ್ದರು.

ವಿಶೇಷವಾದ ಕೇಶ, ಬಣ್ಣ, ದೇಹಾಕಾರದಿಂದ ಶ್ವಾನಗಳು ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ನೋಡುವುದಕ್ಕೆ ಭಯ ತರಿಸುವಂತಿದ್ದರೂ, ಬಹಳ ಮೃದು ಸ್ವಭಾವದ ಶ್ವಾನಗಳಾಗಿದ್ದವು. ಪ್ರೇಕ್ಷಕರು ಸುತ್ತುವರಿದು ನಾ ಮುಂದು, ತಾ ಮುಂದು ಎಂದು ಸೆಲ್ಫಿ ಕ್ಲಿಕ್ಕಿಸಿದರೂ ಅವುಗಳು ಶಾಂತವಾಗಿದ್ದವು. ಮಾಲೀಕರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದವು. ಒಂದು ಕೆ.ಜಿ.ಯಿಂದ 150 ಕೆ.ಜಿ. ತೂಕದ ಶ್ವಾನಗಳು ಪಾಲ್ಗೊಂಡಿದ್ದವು. ಕೆಲವು ಶ್ವಾನಗಳು ಅಬ್ಬಾ ಎಂಬ ಉದ್ಗಾರ ತೆಗೆಯುವ ರೀತಿ ಇದ್ದವು.

ಮೂರು ಶ್ವಾನಗಳನ್ನು ಬಹುಮಾನಕ್ಕೆ (ಚಾಂಪಿಯನ್‌ಶಿಪ್‌) ಆಯ್ಕೆ ಮಾಡಲಾಯಿತು. ಮಹಾರಾಷ್ಟ್ರದ ಪ್ರಮೋದ ಸಾಳ್ವಂಕೆ, ಹುಬ್ಬಳ್ಳಿಯ ವಿನಾಯಕ ಹುಬ್ಬಳ್ಳಿ ಹಾಗೂ ಪ್ರವೀಣ ಪಾಟೀಲ ಅವರ ಶ್ವಾನಗಳು ಚಾಂಪಿಯನ್ ಎನಿಸಿದವು. 20 ಶ್ವಾನಗಳಿಗೆ ಬಹುಮಾನ ನೀಡಲಾಯಿತು.

‌ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖಂಡರಾದ ಕಲ್ಲಪ್ಪ ಮಗೆಣ್ಣವರ, ಸಂಜೀವ ಭಿರಡಿ, ಪ್ರವೀಣ ಗಾಣಿಗೇರ, ಸಂಜಯ ಕುಚನೂರೆ, ಪ್ರವೀಣ ಕುಲಕರ್ಣಿ, ಕುಮಾರ ಅಪರಾಜ, ಕೃಷಿ ಮೇಳದ ರೂವಾರಿಗಳಾದ ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ, ಮಂಜುನಾಥ ಕುಚನೂರೆ, ಮಲ್ಲಿಕಾರ್ಜುನ ಕೋಲಾರ, ಅನಿಲಕುಮಾರ ಸತ್ತಿ, ಶೀತಲ ಬಾಲೋಜಿ, ರಾಜು ಖವಟಗೊಪ್ಪ, ಭರತೇಶ ಪಾಟೀಲ, ಅಶೋಕ ಭೋಸಗಿ, ಶಾಮರಾವ್ ನಾಯಿಕ್, ಸಂತೋಷ ಗುಂಡಾಳೆ, ಸಂತೋಷ ಕುಡಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT