ಗುರುವಾರ , ಮಾರ್ಚ್ 4, 2021
20 °C
ಬರ ವೀಕ್ಷಣೆಗೆ ಬಂದ ಸಂಸದ ಸುರೇಶ ಅಂಗಡಿಗೆ ರೈತರ ಪ್ರಶ್ನೆ

ನೀವೂ ಬಂದಿಲ್ಲ; ಫಸಲ್‌ ಬಿಮಾ ಹಣವೂ ಬಂದಿಲ್ಲ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸವದತ್ತಿ: ‘ಎರಡನೇ ಬಾರಿ ಎಂ.ಪಿ ಆದ ಮ್ಯಾಲ್‌ ನಮ್ಮೂರ ಕಡೆ ಬಂದೆ ಇಲ್ಲಾ. ಇನ್ನೂ ಮೋದಿ ಕೊಡಮಾಡಿದ ಫಸಲ್‌ ಬಿಮಾ ಯೋಜನೆಯ ಹಣಾನೂ ಜಮಾ ಆಗಲಿಲ್ಲ. ಮೋದಿ ಅವರು ನಮಗೇನು ಅನುಕೂಲ ಮಾಡಲಿಲ್ಲಾ. ಹಿಂಗಾದ್ರ್‌ ಹ್ಯಾಂಗ್ರೀ ಸಾಹೇಬ್ರ್‌’ ಎಂದು ತಾಲ್ಲೂಕಿನ ಬಹುತೇಕ ರೈತರು ಸಂಸದ ಸುರೇಶ ಅಂಗಡಿ ಅವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಎಸೆದರು.

‘2016–17ನೇ ಸಾಲಿನಲ್ಲಿ ಫಸಲ್‌ ಬಿಮಾ ಯೋಜನೆಗೆ ತುಂಬಿದ ಹಣಾ ಹೊಯಿತು, ಬೆಳೆನೂ ಹೊಯಿತು. ನಿಮ್ಮ ಕಡೆಯಿಂದ ಕವಡೆ ಕಾಸು ಬರಲಿಲ್ಲಾ. ನೀವು ಮಾತ್ರ ಈಗ ನಮ್ಮ ತಾಲ್ಲೂಕಿಗೆ ಬಂದಿರಿ. ಅಂದು ನಮ್ಮ ಗ್ರಾಮದಲ್ಲಿ ಪ್ರಗತಿಗೆ ಅನುದಾನ ಕೊಡುವ ಭರವಸೆ ನಿಡಿದ್ದಿರ್ರೀ. ಅದು ಇಲ್ಲಾ ಇದು ಇಲ್ಲಾ’ ಎಂದು ಇನಾಮಹೊಂಗಲದ ಉಳ್ಳಿಗೇರಿ ರೈತ ದತ್ತಾತ್ರೆಯ ಕುಲಕರ್ಣಿ ಪ್ರಶ್ನಿಸಿದರು.

ರೈತರು ತಾವು ತುಂಬಿದ ಹಣದ ರಸೀದಿ ತೊರಿಸಿದರು. ಈ ಕುರಿತು ಕೇಂದ್ರ ಸರ್ಕಾರ ವಿರುದ್ಧ ನ್ಯಾಯಾಲಯದ ಮೋರೆ ಹೋಗುವುದಾಗಿ ಹೇಳಿದರು.

ರಶೀದಿ ನೋಡಿದ ಸಂಸದ ಸುರೇಶ ಅಂಗಡಿ, ಸ್ವಾತಂತ್ರ್ಯ ನಂತರ ರೈತರ ಬೆಳೆಹಾನಿಗೆ ಇಷ್ಟೊಂದು ಹಣ ಯಾವ ಸರ್ಕಾರ ಕೊಟ್ಟಿಲ್ಲಾ. ಮೋದಿ ಅವರು ಕೊಟ್ಟಿದ್ದಾರೆ. ಅದನ್ನು ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ₹109 ಕೊಟಿ ಹಣ ಬಂದಿದೆ. ರಾಮದುರ್ಗಕ್ಕೆ ₹37, ಸವದತ್ತಿಗೆ ₹24 ಕೊಟಿ ಹಣ ಮಂಜೂರಾಗಿದೆ. ಹಣ ಜಮಾ ಆಗದೆ ಇರುವುದಕ್ಕೆ ಅಧಿಕಾರಿಗಳು ಕಾರಣ’ ಎಂದು ಹೇಳಿದರು.

ತಾಲ್ಲೂಕಿನ ರೈತರು ನಯಾಪೈಸೆ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಕೇಳಿದಕ್ಕೆ ಮಾತನಾಡಿ, ಸವದತ್ತಿಯಲ್ಲಿ ಸದಾ ಕೆಲಸಗಾರ. ಕ್ರಿಯಾಶೀಲ ಶಾಸಕ ಆನಂದ ಮಾಮನಿ ಇದ್ದಾರೆ. ಅವರನ್ನು ಸವದತ್ತಿ ನರೇಂದ್ರ ಮೋದಿ ಎನ್ನುತ್ತೇವೆ. ಅವರು ಕರೆದರೆ ನಾವು ಬಂದೇ ಬರುತ್ತೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.