ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿ, ಬಾಣಂತಿ, ಮಕ್ಕಳಿಗೆ ಮೊಟ್ಟೆ ವಿತರಣೆ ಹಲವೆಡೆ ಸ್ಥಗಿತ!

ಸಚಿವರ ತವರಲ್ಲೇ ಯೋಜನೆ ಅನುಷ್ಠಾನಕ್ಕೆ ಹಿನ್ನಡೆ
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಗರ್ಭಿಣಿಯರು, ಬಾಣಂತಿಯರು ಮತ್ತು 6 ವರ್ಷದೊಳಗಿನ ಮಕ್ಕಳಿಗೆ ಸರ್ಕಾರವು ಅಂಗನವಾಡಿ ಕೇಂದ್ರಗಳ ಮೂಲಕ ಕೋಳಿಮೊಟ್ಟೆ ವಿತರಿಸುವ ಕಾರ್ಯ ಹಲವೆಡೆ ಸ್ಥಗಿತಗೊಂಡಿದೆ. ಲಾಕ್‍ಡೌನ್‍ನಿಂದಾಗಿ ಬಡ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಪೌಷ್ಟಿಕತೆಗೆ ಈಡಾಗುವ ಆತಂಕವೂ ಎದುರಾಗಿದೆ.

ತಾಯಿ ಮತ್ತು ಶಿಶು ಮರಣ ಹಾಗೂ ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ತಗ್ಗಿಸುವುದು, 6 ವರ್ಷದೊಳಗಿನ ಮಕ್ಕಳಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಮಟ್ಟ ಹೆಚ್ಚಿಸುವುದು, ಗರ್ಭಿಣಿಯರು, ಬಾಣಂತಿಯರಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಹಾಲಿನ ಪುಡಿ ಮೊದಲಾದ ಆಹಾರ ವಿತರಿಸಲಾಗುತ್ತಿದೆ.

ಆದರೆ, 2 ತಿಂಗಳುಗಳಿಂದ ತಾಲ್ಲೂಕಿನ ಹಲವೆಡೆ ಫಲಾನುಭವಿಗಳಿಗೆ ಮೊಟ್ಟೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೊಟ್ಟೆ ದರ ಏರಿಕೆಯ ಕಾರಣ ಹೇಳಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ತವರು ಜಿಲ್ಲೆಯಲ್ಲೇ ಇಲಾಖೆಯ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಸೋಜಿಗ ಮೂಡಿಸಿದೆ.

ವಂಚಿತರಾಗಿದ್ದಾರೆ

‘ತಾಲ್ಲೂಕಿನ ಕರಗಾಂವ, ಮಮದಾಪುರ, ಡೋಣವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಎರಡು ತಿಂಗಳುಗಳಿಂದ ಮೊಟ್ಟೆ ವಿತರಿಸುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಬಡ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಸರ್ಕಾರದಿಂದ ಮೊಟ್ಟೆ ವಿತರಣೆಯೂ ವಿಳಂಬವಾಗುತ್ತಿದೆ. ಹೀಗಾಗಿ ಬಡಕುಟುಂಬದ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂದು ಘಟಪ್ರಭಾದ ಸಾಮಾಜಿಕ ಪರಿವರ್ತನಾ ಜನಾಂದೋಲನದ ಕಾರ್ಯದರ್ಶಿ ಶೋಭಾ ಗಸ್ತಿ ತಿಳಿಸಿದರು.

ಏರಿಕೆಯಾದ್ದರಿಂದ

‘ತಾಲ್ಲೂಕಿನಲ್ಲಿ 243 ಅಂಗನವಾಡಿ ಕೇಂದ್ರಗಳಿವೆ. 2,251 ಗರ್ಭಿಣಿಯರು, 1,853 ಬಾಣಂತಿಯರು, 6 ತಿಂಗಳುಗಳಿಂದ 3 ವರ್ಷದೊಳಗಿನ 9,762 ಮತ್ತು 3ರಿಂದ 6 ವರ್ಷದೊಳಗಿನ 8,702 ಮಕ್ಕಳು ಸೇರಿದಂತೆ ಒಟ್ಟು 18,464 ಫಲಾನುಭವಿಗಳಿದ್ದಾರೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತಿ ತಿಂಗಳು 24 ಕೋಳಿ ಮೊಟ್ಟೆ, ಹಾಲಿನ ಪುಡಿ, ಸಕ್ಕರೆ,ಹೆಸರು ಕಾಳು, ಗೋಧಿ, ತೊಗರಿ ಬೇಳೆ, ಶೇಂಗಾ ಕಾಳು, ಬೆಲ್ಲ, ಮಸಾಲೆ, 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳು 8 ಕೋಳಿ ಮೊಟ್ಟೆ, ಹಾಲಿನ ಪುಡಿ, ಸಕ್ಕರೆ, ಹೆಸರು ಕಾಳು, ತೊಗರಿ ಬೇಳೆ, ಅಕ್ಕಿ, ಮಸಾಲೆ ನೀಡಲಾಗುತ್ತಿದೆ. 16 ವರ್ಷದೊಳಗಿನ ಕಿಶೋರಿಯರಿಗೆ ಹೆಸರು ಕಾಳು, ಗೋಧಿ ಅಥವಾ ಅಕ್ಕಿ, ತೊಗರಿ ಬೇಳೆ, ಶೇಂಗಾ ಕಾಳು ಕೊಡಲಾಗುತ್ತಿದೆ’ ಎಂದು ಸಿಡಿಪಿಒ ದೀಪಾ ಕಾಳೆ ಹೇಳಿದರು.

‘ಲಾಕ್‍ಡೌನ್‍ನಿಂದಾಗಿ ಕೋಳಿ ಮೊಟ್ಟೆ ದರ ಏರಿಕೆಯಾಗಿದೆ. ₹ 5ರಿಂದ ₹ 8ಕ್ಕೆ ಏರಿದೆ. ಕೆಲವು ವರ್ತಕರು ₹ 5ರಂತೆಯೇ ಇಲಾಖೆಗೆ ಮೊಟ್ಟೆ ಸರಬರಾಜು ಮಾಡುತ್ತಿದ್ದು, ಅಂತಹ ಪ್ರದೇಶಗಳಲ್ಲಿ ವಿತರಿಸಲಾಗುತ್ತಿದೆ. ₹ 8 ಹೊಂದಿಸಲು ಆಗದ ಕೆಲವೆಡೆ, ಲಾಕ್‍ಡೌನ್‍ ತೆರವಾದ ನಂತರ ಕೊಡಲಾಗುವುದು' ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಾಂಶಗಳು

ಬೆಲೆ ಏರಿಕೆ ನೆಪ

ಫಲಾನುಭವಿಗಳಿಗೆ ಸಿಗದ ಸೌಲಭ್ಯ

ಕೂಡಲೇ ವಿತರಣೆಗೆ ಆಗ್ರಹ

ಜನರೇನಂತಾರೆ?

ಕೋವಿಡ್ ಪರಿಸ್ಥಿತಿಯಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ಪ್ರತಿ ತಿಂಗಳೂ ದೊರೆಯುವಂತೆ ಮಾಡಬೇಕು
ಶೋಭಾ ಗಸ್ತಿ
ಕಾರ್ಯದರ್ಶಿ, ಸಾಮಾಜಿಕ ಪರಿವರ್ತನಾ ಜನಾಂದೋಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT