ಸವದತ್ತಿ: ‘ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಜ್ಞಾನ ಪದವಿ ಕೋರ್ಸ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ಯಾರಾ ಮೆಡಿಕಲ್, ಡಿಪ್ಲೋಮಾ ಹಾಗೂ ಇತರೆ ಉನ್ನತ ಕೋರ್ಸ್‌ಗಳನ್ನು ಮಂಜೂರಾತಿ ಪಡೆದು ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುವುದು’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ನಿಕ್ಕಮ್ ಕಲ್ಯಾಣ ಮಂಟಪದಲ್ಲಿ ಗುರುವಾರ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಕರ ಸಂಘದಿಂದ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಲಾ ಮಕ್ಕಳಿಗೆ ಶುದ್ಧ ನೀರು ಒದಗಿಸಲು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಪ್ರತಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ವಿವೇಕ ಯೋಜನೆಯಡಿ 200ಕ್ಕೂ ಅಧಿಕ ಹೆಚ್ಚುವರಿ ಶಾಲಾ ಕೊಠಡಿ, 50 ಅಧಿಕ ಸ್ಮಾರ್ಟ್ ಕ್ಲಾಸ್ ಸೇರಿ ಮಕ್ಕಳ ಕಲಿಕೆಗೆ ಪೂರಕ ಕ್ರಮ ಜರುಗಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಟ್‌ಟಾಪ್ ನೀಡಲಾಗುತ್ತಿದೆ’ ಎಂದರು.
ತಹಶಿಲ್ದಾರ್ ಎಂ.ಎನ್.ಹೆಗ್ಗನ್ನವರ ಮಾತನಾಡಿ, ‘ ಡಾ.ಎಸ್.ರಾಧಾಕೃಷ್ಣನ್ ಅವರು ದೇಶದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹಾನ್ ಚೇತನ. ಇಂದಿನ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು’ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಎಂ.ಎಂ. ಸಿಂಧೂರ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಮೋಹನ ದಂಡಿನ್, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ಇಓ ಆನಂದ ಬಡಕುಂದ್ರಿ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಿಗಿಮಠ, ಪ್ರಶಾಂತ ಹಂಪಣ್ಣವರ ಹಾಗೂ ಪ್ರಮುಖರು ಇದ್ದರು.