ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಶಯ
Last Updated 10 ಏಪ್ರಿಲ್ 2021, 15:52 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಕಟ್ಟಕಡೆಯ ವ್ಯಕ್ತಿಗೂ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಿಲು ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಿರುವ ‘ಬೈ ಪ್ಲೇನ್ ಕ್ಯಾಥ್‌ಲ್ಯಾಬ್‌’ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಲ ಸೌಲಭ್ಯಗಳಲ್ಲಿ ಆರೋಗ್ಯವೂ ಒಂದು ಎಂದು ತಿಳಿದು ಕಾರ್ಯನಿರ್ವಹಿಸಬೇಕು. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ ನೀಡಲು ಆಸ್ಪತ್ರೆಗಳು ಸದಾ ಕಾರ್ಯಪ್ರವೃತ್ತರಾಗಬೇಕು. ಆಧುನಿಕ ತಂತ್ರಜ್ಞಾನ ಬಳಸಬೇಕು’ ಎಂದು ಸಲಹೆ ನೀಡಿದರು.

‘ಆಧುನಿಕತೆ ಬೆಳೆದಂತೆ ಆರೋಗ್ಯ ಕ್ಷೇತ್ರವೂ ಅನೇಕ ಆವಿಷ್ಕಾರಗಳೊಂದಿಗೆ ಜನ ಸೇವೆಗೆ ಲಭ್ಯವಾಗುತ್ತಿದೆ. ಈ ಹಿಂದೆ ಶಸ್ತ್ರಚಿಕಿತ್ಸೆ ಕ್ಲಿಷ್ಟಕರವಾಗಿ ಉಳಿದಿಲ್ಲ. ಇಂದು ಕೇವಲ ಒಂದು ರಂದ್ರವನ್ನಷ್ಟೆ ಮಾಡಿ ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಶೀಘ್ರ ಗುಣಮುಖಗೊಳಿಸುವುದೂ ಸಾಧ್ಯವಾಗುತ್ತಿದೆ’ ಎಂದು ತಿಳಿಸಿದರು.

‘ಈ ಭಾಗದ ಜನರಿಗೆ ನೂತನ ಆರೋಗ್ಯ ಸೇವೆ ಕಲ್ಪಿಸಲು ಸದಾ ಹಾತೊರೆಯುವ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯು ಈಗ ಬೈ ಪ್ಲೇನ್ ಕ್ಯಾಥ್‌ಲ್ಯಾಬ್‌ ಮೂಲಕ ಆರೋಗ್ಯ ರಕ್ಷಣೆಗೆ ನಾವು ಬದ್ಧ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಿತ್ಯವೂ ಸಾವಿರಾರು ರೋಗಿಗಳಿಗೆ ಉಚಿತ ಊಟೋಪಚಾರದ ಜೊತೆಗೆ ಚಿಕಿತ್ಸೆ ಕಲ್ಪಿಸುತ್ತಿರುವುದು ಅತ್ಯಂತ ಶ್ಲಾಘನೀಯ’ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘₹ 5 ಕೋಟಿ ವೆಚ್ಚದಲ್ಲಿ ಈ ಲ್ಯಾಬ್‌ ಸ್ಥಾಪಿಸಲಾಗಿದೆ. ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ ಜನರಿಗೆ ಈ ಸೇವೆಯು ಲಭ್ಯವಾಗಲಿದೆ. ಈ ಭಾಗದ ಜನರು ಪಾರ್ಶ್ವವಾಯುವಿನಿಂದ ಬಳಲುವ ಪ್ರಮಾಣವು ಕಡಿಮೆಯಾಗಲಿದೆ’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಡಾ.ವಿ.ಐ. ಪಾಟೀಲ, ಶಾಸಕ ಅನಿಲ ಬೆನಕೆ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವೋಜಿ, ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ನಿರ್ದೇಶಕ (ಕ್ಲಿನಿಕಲ್) ಡಾ.ಆರ್.ಬಿ. ನೇರ್ಲಿ, ಡಾ.ವಿ.ಡಿ. ಪಾಟೀಲ, ಡಾ.ರಾಜೇಶ ಪವಾರ, ಡಾ.ವಿ.ವಿ. ಪಟ್ಟಣಶೆಟ್ಟಿ, ಡಾ.ನವೀನ ಮೂಲಿಮನಿ, ಡಾ.ಅಭಿನಂದನ್ ರೂಗೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT