ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಬಾಬಾಗೌಡ ಪಾಟೀಲ ಆರೋಪ

Last Updated 23 ಜನವರಿ 2021, 10:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ರೈತ ಹಿತರಕ್ಷಣ ಪರಿವಾರ ವತಿಯಿಂದ ಜ.26 ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ವಿರೋಧ ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಟ್ರ್ಯಾಕ್ಟರ್‌ ರ‍್ಯಾಲಿ ಮಾಡಲಾಗುವುದು ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣಕ ಗಣತಂತ್ರವಾಗಿದೆ. ಈಗ ನಿಜವಾದ ಗಣತಂತ್ರಕ್ಕಾಗಿ ಹೋರಾಟ ನಡೆದಿದೆ. ಸರ್ಕಾರ ಘೋಷಿಸುವ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನ ಖರೀದಿಸುವಂತಿಲ್ಲ ಎಂದು ಕಾನೂನು ಮಾಡಲಿ ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿಗೆ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ಮಾಡುತ್ತಿರುವವರ ಜತೆಗೆ ಮಾತನಾಡಲು ಧೈರ್ಯವಿಲ್ಲವೇ? ಅವರ ಮುಖ ನೋಡಲು ಅವರಿಗೆ ಇಷ್ಟವಿಲ್ಲವೇ? ರೈತರ ಮುಖಂಡರನ್ನು ಕಚೇರಿಗೆ ಕರೆದು ಮಾತನಾಡಬಹುದಿತ್ತು. ರಿಮೋಟ್‌ ಕಂಟ್ರೋಲ್‌ ಮೇಲೆ ನಡೆಯುವ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಕಳುಹಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ವಿಶ್ವಾಸಕ್ಕೆ ಅರ್ಹವಾಗಿಲ್ಲ. ಹಾಗಾಗಿ, 18 ತಿಂಗಳ ಕಾಯ್ದೆ ತಡೆ ಹಿಡಿಯುವ ಪ್ರಸ್ತಾವ ತಿರಸ್ಕರಿಸಲಾಗಿದೆ. ನೋಟು ರದ್ದತಿ, ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗಾದ ತೊಂದರೆ, ಕೇಂದ್ರ ನಡೆದುಕೊಂಡ ನೀತಿ ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ ಎಂದು ಟೀಕಿಸಿದರು.

ದೇಶದಲ್ಲಿ ಸರ್ವಾಧಿಕಾರ ಆಡಳಿತ ಆರಂಭವಾಗಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವು ಸರ್ಕಾರದ ಆಡಳಿತ ಟೀಕಿಸುವ ಹಕ್ಕು ನೀಡಿದೆ. ಆದರೆ, ಇಲ್ಲಿ ಟೀಕಿಸಿದವರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಹಣದ ಆಧಾರದ ಮೇಲೆ ಚುನಾವಣೆ ನಡೆಸಲು ಆಡಳಿತರಲ್ಲಿರುವ ಸರ್ಕಾರ ಮುಂದಾಗಿದೆ. ಒಂದೇ ಒಂದು ಹೊಸ ನೀರಾವರಿ ಯೋಜನೆ ಘೋಷಿಸಿಲ್ಲ. ದೇಶದಲ್ಲಿ ಅ‍ಪೌಷ್ಟಿಕತೆಯಿಂದ ಎಷ್ಟು ಮಕ್ಕಳು ಸಾಯುತ್ತಿವೆ ಎಂಬ ಅಂಕಿ–ಅಂಶ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಎತ್ತು, ಆಕಳು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಕಾನೂನು ಮಾಡಿದೆ. ಆದರೆ, ವಯಸ್ಸಾದ ಬರಡು ದನಗಳನ್ನು ಇಟ್ಟುಕೊಳ್ಳಲು ಜಾಗವಿಲ್ಲ. ಸರ್ಕಾರವೇ ಖರೀದಿ ಮಾಡಿ ಸಾಕಿಕೊಳ್ಳಲಿ ಎಂದು ಸಲಹೆ ಮಾಡಿದರು.

ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬರಡು ದನಗಳ ಹೊರೆಯನ್ನು ಅವರ ಮೇಲೆ ಹೊರಿಸುವ ಮೂಲಕ ಮತ್ತಷ್ಟು ಹೊರೆ ಹೊರಿಸಬಾರದು. ಈ ಕಾನೂನು ವಾಪಸ್‌ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಾನಂದ ಅಂಬಡಗಟ್ಟಿ, ಪಿ.ಎಚ್‌. ನೀರಲಕೇರಿ, ಗುರುರಾಜ ಹುಣಸಿಮರದ, ಶಾಕೀರ ಸನದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT