ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಕುಂಬಳಕಾಯಿ ಬೆಳೆದು ‘ಕಹಿ’ ಉಂಡರು

Last Updated 17 ಮೇ 2021, 14:29 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಸಣ್ಣ ರೈತ ಬಾಳಪ್ಪ ಬಬಲಿ ಒಂದು ಎಕರೆಯಲ್ಲಿ ಬೆಳೆದಿದ್ದ ಗುಂಡು ಸಿಹಿ ಕುಂಬಳಕಾಯಿಗೆ ಕೋವಿಡ್‌ 2ನೇ ಅಲೆಯ ಕಾರಣದಿಂದ ಮಾರುಕಟ್ಟೆ ದೊರೆಯದೆ ನಷ್ಟ ಅನುಭವಿಸಿದ್ದಾರೆ.

‘ಹೋದ ವರ್ಷವೂ ಲಾಕ್‌ಡೌನ್‌ನಿಂದ ಹೀಂಗ್ ಲುಕ್ಸಾನ್ ಆತ್ರೀ, ಈ ವರ್ಷವೂ ಕೊರೊನಾ ಕಾಟದಾಗ ಹಾನಿ ಆಗೇತ್ರೀ' ಎಂದು ಬಾಳಪ್ಪ ‘ಪ್ರಜಾವಾಣಿ’ಯೊಂದಿಗೆ ನೋವು ತೋಡಿಕೊಂಡರು.

‘ಸಾಮಾನ್ಯವಾಗಿ ಕುಂಬಳಕಾಯಿಯನ್ನು ಕೆ.ಜಿ.ಗೆ ₹10ರಿಂದ ₹12ರಂತೆ ಖರೀದಿಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಬೇಡಿಕೆ ಇಲ್ಲದಿರುವುದರಿಂದ ₹3ರಿಂದ ₹4ಕ್ಕೆ ಕೇಳುತ್ತಿದ್ದಾರೆ. ಅದರಿಂದ, ಮಾಡಿದ ಖರ್ಚು ಕೂಡ ಬರೋದಿಲ್ಲರೀ’ ಎಂದು ಹೇಳಿದರು.

ಎಕರೆಗೆ 6 ಟನ್‌ ಉತ್ತಮ ಇಳುವರಿ ಬಂದಿದ್ದು ಅಂದಾಜು ₹75ಸಾವಿರದಿಂದ ₹ 80ಸಾವಿರದಷ್ಟು ನಷ್ಟ ಅನುಭವಿಸುವಂತಾಗಿದೆ. ಮೂರು ವಾರಗಳ ಹಿಂದೆ ಕಿತ್ತು ತೋಟದಲ್ಲಿ ರಾಶಿ ಹಾಕಿದ್ದಾರೆ. ನಿತ್ಯವೂ ಕೊಳ್ಳುವವರಿಗೆ ಕಾಯುವಂತಾಗಿದೆ.

ಎರಡು ಎಕರೆ ಜಮೀನು ಹೊಂದಿರುವ ಅವರು ಬೆಂಡೆಕಾಯಿ, ಮೆಣಸಿನಕಾಯಿ, ಬದನೆ, ಸೌತೆಕಾಯಿ, ಸೋರೆಕಾಯಿ, ಹೀರೇಕಾಯಿ ಮೊದಲಾದ ತರಕಾರಿ ಬೆಳೆಗಳನ್ನೇ ನಂಬಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದ ಸಂತೆಗಳು ನಡೆಯುತ್ತಿಲ್ಲ. ಮದುವೆ ಮತ್ತಿತರ ಸಮಾರಂಭಗಳಿಲ್ಲ. ಹೋಟೆಲ್‌ಗಳಿಲ್ಲ. ನೆರೆಯ ಮಹಾರಾಷ್ಟ್ರದ ಮುಂಬೈ ಮಾರುಕಟ್ಟೆಯೂ ಬಂದ್ ಆಗಿದೆ. ಜಾತ್ರೆಗಳಿಲ್ಲ. ಇವೆಲ್ಲದರ ಪರಿಣಾಮ ತರಕಾರಿ ಬೆಳೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ತುಕ್ಕಾನಟ್ಟಿಯ ಭಾಗದಲ್ಲಿಯ ಅನೇಕ ತರಕಾರಿ ಬೆಳೆಯುವ ರೈತರ ಪರಿಸ್ಥಿತಿ ಚಿಂತಜನಕವಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಹ ಅಸಹಾಯಕರಾಗಿದ್ದಾರೆ ಎಂದು ರೈತರು ದೂರುತ್ತಾರೆ.

ಅಧಿಕಾರಿಗಳು ಸ್ಪಂದಿಸಿ ಮಾರುಕಟ್ಟೆ ದೊರೆಯುವಂತೆ ಮಾಡಿಕೊಡಬೇಕು. ಇಲ್ಲವೇ ‍ಪರಿಹಾರ ಕಲ್ಪಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT