ಮಂಗಳವಾರ, ಜನವರಿ 26, 2021
16 °C

ಕೇಂದ್ರ ಹಟಮಾರಿ ಧೋರಣೆ ಬಿಡಲಿ: ಪ್ರತಿಭಟನೆಯಲ್ಲಿ ಬಾಬಾಗೌಡ ಪಾಟೀಲ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರು ಟ್ರ್ಯಾಕ್ಟರ್‌ ಜಾಥಾ ಮೂಲಕ ನಡೆಸಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಹಾಗೂ ರಾಜ್ಯ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಚಮ್ಮಮ್ಮ ವೃತ್ತ ಮಾರ್ಗವಾಗಿ 22 ಟ್ರ್ಯಾಕ್ಟರ್‌ಗಳಲ್ಲಿ ಬಂದ ರೈತರು, ಸರ್ದಾರ್‌ ಪ್ರೌಢಶಾಲಾ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬಾಬಾಗೌಡ, ‘ಸರ್ಕಾರಗಳು ರೈತರೊಂದಿಗೆ ಜಿದ್ದಿಗೆ ಬಿದ್ದರೆ ಮುಂದೆ ದೇಶಕ್ಕೆ ಅನ್ನ ನೀಡುವವರೇ ಇಲ್ಲದಂತಾಗುತ್ತದೆ. ಕೇಂದ್ರವು ಹಟಮಾರಿ ಧೋರಣೆ ಕೈ ಬಿಟ್ಟು ಕೃಷಿಕರ ಸಂಕಷ್ಟಗಳ ನಿವಾರಣೆಗೆ ತಕ್ಷಣ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

‘ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಸಂಸತ್ತಿನಲ್ಲಿ ಕುಳಿತು ರಚನೆ ಮಾಡಲಾಗುವುದಿಲ್ಲ. ಅದನ್ನು ಹೊಲದಲ್ಲಿ ರೈತರೊಂದಿಗೆ ಕುಳಿತು ಚರ್ಚಿಸಿ, ಸಾಧಕ–ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿ ಜಾರಿಗೆ ತರಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ರೈತರಿಗೆ ಮಾರಕವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ’ ಎಂದು ಕಿಡಿಕಾಡಿದರು.

‘ಮೋದಿಗಾಗಲಿ ಅಥವಾ ಅಮಿತ್ ಶಾ ಅವರಿಗಾಗಲಿ ಬದನೆಕಾಯಿ ಬೆಳೆದು ಗೊತ್ತಿಲ್ಲ. ಅದನ್ನು ಹೇಗೆ ಬೆಳೆಯುತ್ತಾರೆ ಎನ್ನುವುದೂ ತಿಳಿದಿಲ್ಲ. ಅವರ ರಾಜಕೀಯ   ಸ್ವಾರ್ಥಕ್ಕೋಸ್ಕರ ಅನ್ನದಾತರನ್ನು ಬಲಿ ಕೊಡುತ್ತಿದ್ದಾರೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರೈತರ ಶಾಪ ತಟ್ಟುತ್ತದೆ. ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ಮಾರಕವಾಗಿದೆ: ಮೋದಗಿ

ಜಿಲ್ಲಾದಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ  ಸಿದಗೌಡ ಮೋದಗಿ, ‘ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಅವುಗಳನ್ನು ರೂಪಿಸಲಾಗಿದೆ’ ಎಂದು ದೂರಿದರು.

‘ದೆಹಲಿಯ ಗಡಿಯಲ್ಲಿ ಸಾವಿರಾರು ರೈತರು ಸತತ ಧರಣಿ ನಡೆಸುತ್ತಿದ್ದರೂ ಕೇಂದ್ರ ಸ್ಪಂದಿಸುತ್ತಿಲ್ಲ. ಸರ್ಕಾರ ಇನ್ನಾದರೂ ತನ್ನ ಮೊಂಡುತನ ಬಿಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆದ ‍ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ, ರಾಮನಗೌಡ ಪಾಟೀಲ, ನಾಮದೇವ ದುಡುಂ, ಮಾರುತಿ ಕಡೇಮನಿ, ದುಂಡಪ್ಪ ಪಾಟೀಲ, ಗಜು ರಾಜಾಯಿ, ರಾಜು ಕಾಗಣೇಕರ, ಮಹಾದೇವಿ ಪಾಟೀಲ, ಬಸವ್ವ ಬೈರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು