ಸೋಮವಾರ, ಆಗಸ್ಟ್ 8, 2022
22 °C

ಅಪ್ಪಂದಿರ ದಿನ: ಕಷ್ಟಪಟ್ಟು ನಮ್ಮನ್ನೆಲ್ಲಾ ಓದಿಸಿದ ಅಪ್ಪ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ‘ನೀವೆಲ್ಲ ಚಲೋ ಶಿಕ್ಷಣ ಪಡೆದುಕೊಳ್ಳಬೇಕು. ಹೊಲಮನೆಯ ಕಷ್ಟದ ಬಗ್ಗೆ ತಲೆಹಾಕಬೇಡಿ. ನೀವು ಕಲಿತು ದೊಡ್ಡವರಾಗಬೇಕು ಎಂದು ನಮಗೆಲ್ಲ ಒಳ್ಳೆಯ ಶಿಕ್ಷಣ ಕೊಡಲಿಕ್ಕೆ ನಮ್ಮ ಅಪ್ಪ ಬಹಳ ಕಷ್ಟಪಟ್ಟಿದ್ದಾರೆ’ ಎಂದು ತಂದೆಯನ್ನು ನೆನೆದು ಇಲ್ಲಿನ ಡಾ.ಸಂಜು ಮುನ್ಯಾಳ ಕಣ್ಣೀರಾದರು.

ಕೋವಿಡ್‌ನಿಂದಾಗಿ ಮೇ 8ರಂದು ಅಕಾಲಿಕವಾಗಿ ಸಾವಿಗೀಡಾದ ಮೂಡಲಗಿಯ ಮಹಾಲಕ್ಷ್ಮೀ ಸೊಸೈಟಿ ಅಧ್ಯಕ್ಷ ಮತ್ತು ಪುರಸಭೆ ಸದಸ್ಯರು ಆಗಿದ್ದ ಪರಪ್ಪ ಮುನ್ಯಾಳ ಅವರ ದ್ವಿತೀಯ ಪುತ್ರ ಸಂಜು ತಮ್ಮ ತಂದೆ ತ್ಯಾಗವನ್ನು ಸ್ಮರಿಸಿದರು.

‘ಅಪ್ಪನಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತು. ಸ್ಕ್ಯಾನ್‌ ಮಾಡಿಸಿದಾಗ ಕೋವಿಡ್‌ ತೀವ್ರತೆ ಇದ್ದದ್ದು ಮತ್ತು ಅಮ್ಲಜನಕದ ಅವಶ್ಯವಿರುವುದು ಗೊತ್ತಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ವಾರದಲ್ಲಿ ಗುಣಮುಖರಾಗಿದ್ದರೂ ಸಹ ವಿಧಿ ಅವರನ್ನು ಬಿಡಲಿಲ್ಲ’.

‘ಕಡುಬಡತನ ಕುಟುಂಬದಲ್ಲಿ ಕಷ್ಟಪಟ್ಟು ಬೆಳೆದಿದ್ದ ನಮ್ಮಪ್ಪ ಬೆಳಗಾವಿ ಪ್ರತಿಷ್ಠಿತ ಕಾಲೇಜದಲ್ಲಿ ಬಿ.ಕಾಂ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ್ದರೂ ನೌಕರಿಗೆ ಹೋಗಲಿಲ್ಲ. ಕುಟಂಬದವರೊಂದಿಗೆ ಕೃಷಿ ಮಾಡಿಕೊಂಡು ಊರಲ್ಲಿ ಎಲ್ಲರೊಂದಿಗೆ ಪ್ರೀತಿ ಗಳಿಸಿಕೊಂಡಿದ್ದ ನಮ್ಮಪ್ಪ ಕಷ್ಟಪಟ್ಟ ಬೆಳೆದ ರೀತಿಯೇ ನಮಗೆ ಮಾದರಿ. ಸೈಕಲ್‌, ಬೈಕ್ ಮೇಲೆ ಕೂರಿಸಿಕೊಂಡು ಶಾಲೆಗೆ ಮತ್ತು ತರಬೇತಿ ಕೇಂದ್ರಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಪದವಿ ಮುಗಿಯುವವರಿಗೂ ಕಲಿಸಿ ನಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದಾರೆ’.

‘ನಾವು ಮೂರು ಮಂದಿ ಗಂಡು ಮಕ್ಕಳು. ದೊಡ್ಡ ಅಣ್ಣ ಸುನೀಲ ಮತ್ತು ತಮ್ಮ ಸಚಿನ ಇಬ್ಬರೂ ಬಿಇ ಮಾಡಿಕೊಂಡು ಸದ್ಯ ಪುಣೆಯಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಬಿಎಎಂಎಸ್, ಎಂಡಿ ಮಾಡಿಕೊಂಡು ಊರಲ್ಲಿ ಖಾಸಗಿ ಆಸ್ಪತ್ರೆ ತೆಗೆದಿರುವೆ. ನಮ್ಮನ್ನೆಲ್ಲ ಬೆಳೆಸಿರುವ ತಂದೆ ಇಲ್ಲ ಎನ್ನುವುದೇ ನಮಗಿರುವ ಕೊರತೆ’ ಎಂದು ಭಾವುಕರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು