ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು ನೀಡಲು ವಿಳಂಬ ಮಾಡಿದರೆ ಕ್ರಮ; ಅಧಿಕಾರಿಗಳಿಗೆ ಎಚ್ಚರಿಕೆ

ಅಗಸರು, ಕ್ಷೌರಿಕರಿಗೆ 5 ಸಾವಿರ ನೆರವು
Last Updated 17 ಜೂನ್ 2020, 14:53 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್- 19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಗಸರು ಮತ್ತು ಕ್ಷೌರಿಕರಿಗೆ ಸರ್ಕಾರ ಘೋಷಿಸಿರುವ ₹ 5 ಸಾವಿರ ನೆರವನ್ನು ಯಾವುದೇ ವಿಳಂಬವಿಲ್ಲದೇ ಅರ್ಹರಿಗೆ ತಕ್ಷಣ ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ತಮ್ಮ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆಸಿದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರದ ನೆರವು ಪಡೆಯಲು ಅಗತ್ಯವಿರುವ ವೃತ್ತಿ ದೃಢೀಕರಣ ಪತ್ರವನ್ನು ನೀಡಲು ವಿನಾಕಾರಣ ವಿಳಂಬ ಮಾಡುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಲೈಸೆನ್ಸ್ ಕಡ್ಡಾಯವಲ್ಲ:‘ಸರ್ಕಾರದ ನೆರವು ಪಡೆಯಲು ವೃತ್ತಿ ಲೈಸೆನ್ಸ್ ಕಡ್ಡಾಯವಲ್ಲ. ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ
ಸಲ್ಲಿಸಲು ಇದೇ ತಿಂಗಳ 30 ಕಡೆಯ ದಿನವಾಗಿದೆ. ವೃತ್ತಿಯ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ವೃತ್ತಿಯ ದೃಢೀಕರಣ ಪತ್ರ ನೀಡಲು ಯಾವುದೇ ಕಾರಣಕ್ಕೂ ನಿರಾಕರಿಸಬಾರದು’ ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸೇವಾಸಿಂಧು ಪೋರ್ಟಲ್‌ನಲ್ಲೇ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕಿರುವುದರಿಂದ ಮುದ್ರಿತ ಅರ್ಜಿಗಳನ್ನು
ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ವೃತ್ತಿಯ ದೃಢೀಕರಣ ಪ್ರಮಾಣಪತ್ರದ ನಮೂನೆಯನ್ನು ಮಾತ್ರ ಎಲ್ಲರಿಗೂ ಸುಲಭವಾಗಿ ಲಭಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿ ಎಲ್ಲರಿಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಮಾತನಾಡಿ, ‘ಸರ್ಕಾರದ ನೆರವು ಪಡೆಯಲು ಕಡ್ಡಾಯವಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಜಾತಿಯ ಬದಲು ವೃತ್ತಿ ಆಧಾರಿತವಾಗಿ ಸರ್ಕಾರ ನೆರವು ನೀಡುತ್ತಿದೆ. ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಉದ್ಯೋಗ ಪ್ರಮಾಣ ಪತ್ರವನ್ನು ಕಾರ್ಮಿಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಂದಾಯ ಅಧಿಕಾರಿ
ಅಥವಾ ನಿರೀಕ್ಷಕರು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಪ್ರಮಾಣಪತ್ರ ನೀಡಲಿದ್ದಾರೆ. ನಂತರ ಡಿಬಿಟಿ ಮೂಲಕ ನೇರವಾಗಿ ಅರ್ಜಿದಾರರ ಖಾತೆಗೆ ಹಣ ಸಂದಾಯವಾಗಲಿದೆ’ ಎಂದರು.

‘ಜಿಲ್ಲೆಯಲ್ಲಿ ಇದುವರೆಗೆ 1226 ಕ್ಷೌರಿಕರು ಮತ್ತು 311 ಅಗಸರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ಕೂಡ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿದರು.

ಅರ್ಜಿಯ ಜತೆಗೆ ಕಡ್ಡಾಯವಾಗಿ ಕೆಲವರು ಲೈಸೆನ್ಸ್ ಕೇಳುತ್ತಿರುವುದರಿಂದ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹಡಪದ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್., ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ತರನ್ನುಮ್, ಮಲ್ಲಿಕಾರ್ಜುನ ಜೋಗೂರ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಗಸರ ಮತ್ತು ಕ್ಷೌರಿಕ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT