ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಚಿಕಿತ್ಸೆ ಜ್ಞಾನ ಹೊಂದಲು ಸಲಹೆ

Last Updated 14 ಜೂನ್ 2019, 11:32 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಥಮ ಚಿಕಿತ್ಸೆ ಬಗ್ಗೆ ಎಲ್ಲರೂ ಕನಿಷ್ಠ ಮಾಹಿತಿಯನ್ನಾದರೂ ಹೊಂದುವುದು ಅಗತ್ಯ. ಇದರಿಂದ ತುರ್ತು ಸಂದರ್ಭಗಳನ್ನು ಎದುರಿಸಬಹುದು’ ಎಂದು ಹಿರಿಯ ವೈದ್ಯ ಡಾ.ಎಚ್‌.ಬಿ. ರಾಜಶೇಖರ ಹೇಳಿದರು.‌

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ನಡೆದ 4ನೇ ಪ್ರಥಮ ಚಿಕಿತ್ಸಾ ಕೌಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅವಘಡಗಳಿಗೆ ಎಡೆಮಾಡಿಕೊಡದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಕೂಡ ಮುಖ್ಯವಾಗುತ್ತದೆ’ ಎಂದು ತಿಳಿಸಿದರು.

‘ಇಂದು ಪ್ರಥಮ ಚಿಕಿತ್ಸೆಯ ಜ್ಞಾನದ ಅಭಾವದಿಂದ ಎಷ್ಟೋ ಜನರು ಅಸುನೀಗುತ್ತಿರುವುದನ್ನು ನೋಡಿದರೆ ತುಂಬಾ ವಿಷಾದವಾಗುತ್ತದೆ. ವೈದ್ಯ ವೃತ್ತಿಯಲ್ಲಿರುವ ನಾವು ಇದನ್ನು ಅರ್ಥ ಮಾಡಿಕೊಂಡು ಮತ್ತೊಬ್ಬರಿಗೆ ತಿಳಿಸಬೇಕು. ಜ್ಞಾನವನ್ನು ಪಸರಿಸಬೇಕು. ಇದರಿಂದ ನಾವು ಕಲಿತದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

ಕಾರ್ಯಕ್ರಮದ ಸಂಯೋಜನಾ ಅಧ್ಯಕ್ಷ, ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿ, ‘ಪ್ರಥಮ ಚಿಕಿತ್ಸಾ ಕೌಶಲಗಳು ಜೀವನದ ಅವಿಭಾಜ್ಯ ಅಂಗವಾಗಬೇಕು. ಅಘಾತ, ಹೃದಯಾಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತವೆ. ಇವುಗಳನ್ನು ಕಲಿಯುವ ಮೂಲಕ ವೈದ್ಯರಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕನೂ ಜೀವ ಉಳಿಸಲು ಶಕ್ತರಾಗಬೇಕು. ಯಾವಾಗ, ಯಾರಿಗೆ, ಯಾವ ರೀತಿಯ ತುರ್ತು ಸಂದರ್ಭಗಳು ಎದುರಾಗುತ್ತವೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಹೀಗಾಗಿ, ಎಲ್ಲ ಸಮಯವನ್ನೂ ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು’ ಎಂದು ಸಲಹೆ ನೀಡಿದರು.

ವೈದ್ಯರಾದ ಡಾ.ವಿಜಯಲಕ್ಷ್ಮಿ ಕುಲಗೋಡ, ಡಾ.ಶೈಲೇಶ ಪಾಟೀಲ, ಡಾ.ಶರದ ಶ್ರೇಷ್ಠಿ, ಡಾ.ಜ್ಯೋತಿ ಜಿ. ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಕೆಎಲ್‌ಇ ಶತಮಾನೊತ್ಸವ ಚಾರಿಟಬಲ್ ಆಸ್ಪತ್ರೆ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್. ಕಡ್ಡಿ, ತಜ್ಞ ವೈದ್ಯರಾದ ಡಾ.ಅನಿತಾ ಮೋದಗೆ, ಡಾ.ಸಂತೋಷಕುಮಾರ ಕರಮಸಿ, ಡಾ.ಸೌಮ್ಯಾ ವೇರ್ಣೇಕರ, ಡಾ.ಬಿ.ಎಸ್. ಮಹಾಂತಶೆಟ್ಟಿ, ಮಕ್ಕಳ ತಜ್ಞರಾದ ಡಾ.ಸುರೇಶ ಕಾಖಂಡಕಿ, ಡಾ.ಬಸವರಾಜ ಕುಡಸೋಮಣ್ಣವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT